ಸಮಗ್ರ ನ್ಯೂಸ್: ಮಹಾ ಶಿವರಾತ್ರಿ ಆಚರಣೆಗೆ ನಾಡಿನೆಲ್ಲೆಡೆ ವಿಶೇಷ ತಯಾರಿ ನಡೆಸಲಾಗುತ್ತಿದ್ದು, ರಾಜ್ಯದ ಪ್ರಸಿದ್ದ ಶಿವಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರಿಗಳ ದಂಡು ಹರಿದುಬಂದಿದೆ.
ಶಿವನ ದೇವಾಲಯಗಳಲ್ಲಿ ಪಾರಾಯಣ ಜಾಗರಣೆ ವಿಶೇಷ ರೀತಿಯಲ್ಲಿ ಆಚರಿಸುತ್ತಾರೆ. ಅದೇ ರೀತಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲೂ ಶಿವರಾತ್ರಿಗೆ ವಿಶೇಷ ಪೂಜೆಗಳು ಜರುಗುತ್ತವೆ. ಶಿವರಾತ್ರಿ ಸಂದರ್ಭ ರಾಜ್ಯದ ವಿವಿಧ ಕಡೆಗಳಿಂದ ಪಾದಯಾತ್ರೆಯ ಮೂಲಕ ಭಕ್ತರು ಧರ್ಮಸ್ಥಳ ಕ್ಷೇತ್ರಕ್ಕೆ ಬರುತ್ತಿದ್ದಾರೆ.
ಭಾನುವಾರ, ಸೋಮವಾರದಂದು ಚಾರ್ಮಾಡಿ ಕಡೆಯಿಂದ ಹೆಚ್ಚಿನ ಪಾದಯಾತ್ರಿಗಳು ಆಗಮಿಸಿದರು. ಹಗಲಲ್ಲಿ ಒಂದಿಷ್ಟು ಬಿಸಿಲಿನ ತಾಪ ಅಧಿಕ ಇರುವ ಕಾರಣ ಸಂಜೆ, ರಾತ್ರಿ ಹಾಗೂ ಬೆಳಗಿನ ಜಾವದಲ್ಲಿ ಅತೀ ಹೆಚ್ಚಿನ ಪಾದಯಾತ್ರಿಗಳು ರಸ್ತೆಯುದ್ದಕ್ಕೂ ಕಂಡುಬಂದರು.
ಪಾದಯಾತ್ರಿಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ಅವರಿಗೆ ಸೇವೆ ನೀಡಲು ರಸ್ತೆಯ ಬದಿಗಳಲ್ಲಿ ಅಲ್ಲಲ್ಲಿ ಸ್ಥಳೀಯರು, ಸಂಘ -ಸಂಸ್ಥೆಗಳು ಸೇರಿ ಪಾನೀಯ, ಫಲಹಾರ ಮೊದಲಾದ ವ್ಯವಸ್ಥೆಗಳನ್ನು ಕಲ್ಪಿಸುತ್ತಿದ್ದಾರೆ. ಶರಬತ್ತು, ಮೊಸರನ್ನ, ರಾಗಿ ಗಂಜಿ, ನೀರು, ಮಜ್ಜಿಗೆ, ಪಾನಕ, ಬೆಲ್ಲ ಇತ್ಯಾದಿಗಳನ್ನು ಪಾದಯಾತ್ರಿಗಳಿಗೆ ನೀಡುವಲ್ಲಿ ಮುತುವರ್ಜಿ ವಹಿಸಲಾಗಿದೆ.
ಮಾರ್ಚ್ 1 ಮಂಗಳವಾರ ಸಂಜೆ 6 ಗಂಟೆಗೆ ಧರ್ಮಸ್ಥಳದ ಪ್ರವಚನ ಮಂಟಪದಲ್ಲಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಶಿವಪಂಚಾಕ್ಷರಿ ಪಠಣ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಬಳಿಕ ಅಹೋರಾತ್ರಿ ಪಾದಯಾತ್ರಿಗಳು ಹಾಗೂ ಭಕ್ತರಿಂದ ಶಿವಪಂಚಾಕ್ಷರಿ ಪಠಣ, ಭಜನೆ ಮೊದಲಾದ ಕಾರ್ಯಕ್ರಮಗಳು ಜರುಗಲಿವೆ.
ದೇವಸ್ಥಾನದಲ್ಲಿ ಭಕ್ತರು ವಿಶೇಷ ಶತರುದ್ರಾಭಿಷೇಕ ಸೇವೆ ಸಲ್ಲಿಸಲಿದ್ದಾರೆ. ಶಂಖ, ಕೊಂಬು, ಕಹಳೆ ಮೊದಲಾದ ಜಾನಪದ ಕಲಾವಿದರಿಂದ ಕಲಾಸೇವೆಯು ನಡೆಯಲಿದೆ. ಧರ್ಮಸ್ಥಳದ ಪ್ರವೇಶದ್ವಾರದ ಬಳಿ ಪಾದಯಾತ್ರಿಗಳಿಗಾಗಿ ಸ್ವಾಗತ ಕಚೇರಿಯನ್ನು ತೆರೆಯಲಾಗಿದೆ.