ಸಮಗ್ರ ನ್ಯೂಸ್: ಮಂಗಳೂರಿನ 64 ವರ್ಷದ ಮಹಿಳಾ ಕ್ರೀಡಾಪಟು ಭವಾನಿ ಜೋಗಿ ಇತ್ತೀಚಿಗೆ ಶ್ರೀಲಂಕಾದಲ್ಲಿ ನಡೆದ 35ನೇ ವಾರ್ಷಿಕ ಮಾಸ್ಟರ್ಸ್ (ಒಪನ್) ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಮೂರು ಚಿನ್ನ, ಒಂದು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗೆಲ್ಲುವುದರೊಂದಿಗೆ ದೇಶಕ್ಕೆ ಕೀರ್ತಿ ತಂದಿದ್ದಾರೆ.
ಇವರು ಇದುವರೆಗೆ ಫೀಲ್ಡ್ ಮತ್ತು ಟ್ರ್ಯಾಕ್ ಸ್ಪರ್ಧೆಗಳಲ್ಲಿ 200ಕ್ಕೂ ಅಧಿಕ ಪದಕಗಳನ್ನು ಗೆದಿದ್ದಾರೆ. ವೃತ್ತಿಯಲ್ಲಿ ನರ್ಸ್ ಆಗಿರುವ ಭವಾನಿ ಮೂಲತ: ಹಾಸನ ಜಿಲ್ಲೆ ಸಕಲೇಶಪುರದವರಾಗಿದ್ದು, ಪ್ರಸ್ತುತ ಮಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಬಾಲ್ಯದಿಂದಲೂ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರೂ ಮನೆಯಲ್ಲಿನ ನಿರ್ಬಂಧದಿಂದಾಗಿ ಅದನ್ನು ವೃತ್ತಿಯನ್ನಾಗಿ ಮಾಡಿಕೊಂಡಿಲ್ಲ. ಮದುವೆ ನಂತರ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದನ್ನು ಆರಂಭಿಸಿದ ಅವರು, ವಯಸ್ಸು ಎಂಬುದು ಅಂಕಿ ಮಾತ್ರ, ಒಬ್ಬರು ಎಷ್ಟು ಕಾಲ ಬದುಕುತ್ತಾರೆ ಎಂಬುದನ್ನು ಲೆಕ್ಕ ಹಾಕಬಾರದು, ಬದಲಿಗೆ ಒಬ್ಬನು ತನ್ನ ಜೀವನದಲ್ಲಿ ಸಾಧಿಸುವ ಎಲ್ಲಾ ಸಂತೋಷದ ಬಗ್ಗೆ ನಿಗಾ ಇಡಬೇಕು ಎಂದು ಅಭಿಪ್ರಾಯ ಪಡುತ್ತಾರೆ.