ಸಮಗ್ರ ನ್ಯೂಸ್: ರಾಜ್ಯದ ವಿವಿಧ ಬಾಲಮಂದಿರಗಳಿಂದ 141 ಮಕ್ಕಳು ನಾಪತ್ತೆಯಾಗಿದ್ದಾರೆ. ಈ ಮಕ್ಕಳನ್ನು ಇದುವರೆಗೆ ಪತ್ತೆ ಹಚ್ಚಲಾಗಿಲ್ಲ. ಹೀಗಾಗಿ ಕೆರಳಿರುವ ಹೈಕೋರ್ಟ್, ಮಕ್ಕಳ ಪತ್ತೆಗಾಗಿ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎನ್ನುವ ತನಿಖಾ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಚಾಟಿ ಬೀಸಿದೆ.
ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಕೆ.ಸಿ ರಾಜಣ್ಣ ಎಂಬುವರು ಸಲ್ಲಿಸಿದ್ದಂತ ಪಿಐಎಲ್ ಅರ್ಜಿಯ ವಿಚಾರಣೆ ನಡೆಸಿದಂತ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಆವಸ್ತಿಯವರ ವಿಭಾಗೀಯ ಪೀಠವು, 141 ಮಕ್ಕಳನ್ನು ಪತ್ತೆ ಹಚ್ಚಲು ಯಾವೆಲ್ಲಾ ಕ್ರಮ ಕೈಗೊಳ್ಳಲಾಗಿದೆ ಎನ್ನುವ ಕುರಿತಂತೆ ಈವರಗೆ ನಡೆಸಿದಂತ ಸಮಗ್ರ ತನಿಖಾ ವರದಿಯನ್ನು ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.
ಅರ್ಜಿದಾರರ ಪರವಾಗಿ ವಕೀಲ ಎಸ್ ಉಮಾಪತಿ ವಾದ ಮಂಡಿಸಿದ್ದರು. ವಾದ ಆಲಿಸಿದಂತ ಹೈಕೋರ್ಟ್ ವಿಭಾಗೀಯ ನ್ಯಾಯಪೀಠವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗೃಹ ಇಲಾಖೆ ಸೇರಿದಂತೆ ಪ್ರಕರಣದ ಎಲ್ಲಾ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ. ಈ ಅರ್ಜಿಯ ವಿಚಾರಣೆಯನ್ನು ಮಾರ್ಚ್.9ಕ್ಕೆ ಮುಂದೂಡಿದೆ