ಸಮಗ್ರ ನ್ಯೂಸ್ ಡೆಸ್ಕ್: ಶಿವಮೊಗ್ಗದಲ್ಲಿ ನಮ್ಮ ಭಜರಂಗದಳ ಕಾರ್ಯಕರ್ತ ಹರ್ಷ ಬೀದಿಯಲ್ಲಿ ಕಗ್ಗೊಲೆಯಾಗಿ ಬಿದ್ದಿರುವುದನ್ನು ನೋಡಿದಾಗ ನನ್ನ ಮನಸ್ಸಿಗೆ ಅತೀವ ವೇದನೆಯಾಗುತ್ತಿದೆ. ಅದೇ ರೀತಿ ನಮ್ಮ ಸರ್ಕಾರ ಬಂದ ಮೇಲೆಯೂ ಕೂಡ ನಮ್ಮ ಕಾರ್ಯಕರ್ತರ ಪರಿಸ್ಥಿತಿ ಹೀಗಾಗುತ್ತಿದೆಯಲ್ಲ ಎಂದು ನಾಚಿಯಾಗುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಭಜರಂಗದಳ ಕಾರ್ಯಕರ್ತನ ಕೊಲೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬಂಟ್ವಾಳದಲ್ಲಿ ಪ್ರಶಾಂತ್ ಪೂಜಾರಿ ಹತ್ಯೆಯಾಗಿತ್ತು. ಅದಾದ ನಂತರ ಸೂರತ್ಕಲ್ನಲ್ಲಿ ದೀಪಕ್ ರಾವ್ ಕೊಲೆಯಾಯ್ತು. ಬೆಂಗಳೂರಿನಲ್ಲಿ ಸಂತೋಷ್ ಹಾಗೂ ಶರತ್ ಮಡಿವಾಳ್ ಹತ್ಯೆಯಾಯಿತು. ಮೈಸೂರಿನಲ್ಲಿ ರಾಜು ಹತ್ಯೆಯಾಯ್ತು, ಕುಶಾಲನಗರದಲ್ಲಿ ಪ್ರವೀಣ್ ಪೂಜಾರಿ ಮತ್ತು ಪುಟ್ಟಪ್ಪ ಹತ್ಯೆಯಾಯಿತು. ಹೀಗೆ ಹಲವರ ಹತ್ಯೆಯಾಯಿತು. ಹೀಗೆ ಪ್ರತಿ ಕೊಲೆ ನಡೆದಾಗಲೂ ಕೂಡ ನಾವು ಎಸ್ಡಿಪಿಐ, ಕೆಎಫ್ಡಿ ಹಾಗೂ ಅಧಿಕಾರದಲ್ಲಿದ್ದಂತಹ ಸಿದ್ದರಾಮಯ್ಯನವರನ್ನು ಬೈಯ್ಯುತ್ತಿದ್ದೆವು.
ಆದರೆ, ಇವತ್ತು ನಮ್ಮ ಕಾರ್ಯಕರ್ತರು ಕಷ್ಟು ಪಟ್ಟು 104 ಸ್ಥಾನಗಳನ್ನು ಬಿಜೆಪಿಗೆ ತಂದು ಕೊಟ್ಟು ನಮ್ಮದೇ ಸರ್ಕಾರ ಬಂದಿದೆ. ನಮ್ಮ ಸರ್ಕಾರ ಬಂದಾಗಲೂ ಕೂಡ ಹೋರಾಟದ ನೆಪದಲ್ಲಿ ಮಂಗಳೂರಿನಲ್ಲಿ ಜನರ ಮೇಲೆ, ಪೊಲೀಸರ ಮೇಲೆ ಆಕ್ರಮಣ ಮಾಡಲು ಬಂದಾಗ ಒಂದಿಬ್ಬರು ಪೊಲೀಸರ ಸಮಯಪ್ರಜ್ಞೆಯಿಂದ ಗೋಲಿಬಾರ್ ನಡೆಯದೇ ಸರ್ಕಾರದ ಮಾರ್ಯಾದೆ ಉಳಿಯಿತು. ಅದಾದ ನಂತರ ಕೆಜೆ ಹಳ್ಳಿ, ಡಿಜೆ ಹಳ್ಳಿ ಪ್ರಕರಣ ನಡೆಯಿತು. ಈ ವೇಳೆ ಪೊಲೀಸರು ಹಾಗೂ ಜನರ ಮೇಲೆ ಆಕ್ರಮಣ ನಡೆಯಿತು. ಆಗಲೂ ಕೂಡ ತಪ್ಪಿಸ್ಥರು ಯಾರಾದರೂ ಬಿಡಲ್ಲ, ಪಾತಾಳಕ್ಕೆ ಇಳಿದು ಬೇಕಾದರೂ ಬಂಧಿಸುತ್ತೇವೆ ಎಂದರು.
ಇವತ್ತು ಹಿಜಾಬ್ ವಿಚಾರ ಬಂದಾಗಲೂ ಕೂಡ ಇಡೀ ರಾಜ್ಯಾದ್ಯಂತ ಒಂದು ರೀತಿ ಅಶಾಂತಿ ವಾತಾವರಣ ಸೃಷ್ಟಿಯಾಯಿತು. ಕೋರ್ಟ್ ಮಧ್ಯಂತರ ಆದೇಶ ಪಾಲಿಸದವರ ಮೇಲೆಯೂ ಯಾವುದೇ ಕ್ರಮ ಕೈಗೊಂಡಿಲ್ಲ. ಇವತ್ತು ಹರ್ಷರ ಕೊಲೆಯಾದ ತಕ್ಷಣ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಅಂದರೆ ನಮ್ಮ ಕಾರ್ಯಕರ್ತರು ನಂಬುತ್ತಾರಾ? ಅದಕ್ಕೋಸ್ಕರ ನನಗೆ ನಾಚಿಗೆಯಾಗುತ್ತೆ.
ಕೆಜೆ ಹಳ್ಳಿ, ಡಿಜೆ ಹಳ್ಳಿ ಪ್ರಕರಣ ನಡೆದಾಗ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಎಸ್ಡಿಪಿಐ, ಕೆಎಫ್ಡಿ ಮೇಲೆ ಕ್ರಮ ಕೈಗೊಂಡಿದ್ದರೆ ಇವತ್ತು ಈ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತಾ? ನಮ್ಮ ಸರ್ಕಾರ ಬಂದ ಮೇಲೆಯೂ ಕಾಂಗ್ರೆಸ್ನ್ನ, ಎಸ್ಡಿಪಿಐ ಅನ್ನ ದೋಷಿಸುತ್ತಿದ್ದರೆ ನಮ್ಮ ಕಾರ್ಯಕರ್ತರು ಕಷ್ಟ ಪಟ್ಟು ನಮಗೆ ಯಾಕೆ ಸರ್ಕಾರ ಕೊಟ್ಟರು. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು.
ನನಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲೆ ವಿಶ್ವಾಸವಿದೆ. ಅವರು ಗೃಹಸಚಿರಾಗಿದ್ದಾಗಲೇ ಕೆಜೆ ಹಳ್ಳಿ, ಡಿಜೆ ಹಳ್ಳಿ ಪ್ರಕರಣ ನಡೆದಿದ್ದು. ಹಾಗಾಗಿ ಅವರಿಗೆ ಎಸ್ಡಿಪಿಐ, ಕೆಎಫ್ಡಿ ದುರುಳ ಕೃತ್ಯಗಳು ಗೊತ್ತಿದೆ. ಇನ್ನಾದರೂ ಕೂಡ ಕ್ರಮ ಕೈಗೊಳ್ಳಿ. ಎಸ್ಡಿಪಿಐ ಬ್ಯಾನ್ ಮಾಡಿ. ಎಸ್ಡಿಪಿಐ ಅತಿಹೆಚ್ಚು ಕೊಲೆ ಮಾಡಿರುವುದು ಕರ್ನಾಟಕದಲ್ಲಿ. ಕರ್ನಾಟಕ ಸರ್ಕಾರ, ಕೇಂದ್ರ ಸರ್ಕಾರಕ್ಕೆ ಎಸ್ಡಿಪಿಐ ಬ್ಯಾನ್ ಮಾಡುವಂತೆ ಶಿಫಾರಸ್ಸು ಮಾಡಿ ಕಳುಹಿಸಬೇಕು. ಇವತ್ತು ಕಠಿಣ ಕ್ರಮ ಕೈಗೊಳ್ಳುತ್ತೇವೆಂದು ಹೇಳಿಕೆ ಕೊಟ್ಟರೆ ಸಾಕಾಗಲ್ಲ. ಇನ್ನಾದರೂ ಎಚ್ಚೆತ್ತುಕೊಳ್ಳುವುದು ಒಳಿತು ಎಂದು ಅವರು ಹೇಳಿದರು.