ಸಮಗ್ರ ನ್ಯೂಸ್ ಡೆಸ್ಕ್: ಡಿಗ್ರಿ ಕಾಲೇಜು ವಿದ್ಯಾರ್ಥಿಗಳಿಗೆ ಯಾವುದೇ ಡ್ರೆಸ್ ಕೋಡ್ ಇಲ್ಲ, ಯಾವುದೇ ರೀತಿಯ ವಸ್ತ್ರವನ್ನು ಮುಕ್ತವಾಗಿ ಧರಿಸಬಹುದು ಎಂದು ಮಂಗಳವಾರ ಹೇಳಿಕೆ ನೀಡಿದ್ದ ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವತ್ಥ ನಾರಾಯಣ ಇದೀಗ ಉಲ್ಟಾ ಹೊಡೆದಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅಶ್ವತ್ಥ ನಾರಾಯಣ, ಶಿಕ್ಷಣ ಸಂಸ್ಥೆಗಳು ಮತ್ತು ಕಾಲೇಜ್ ಅಭಿವೃದ್ಧಿ ಸಮಿತಿ ಸೂಚಿಸಿರುವ ವಸ್ತ್ರ ಸಂಹಿತೆ ಬಗ್ಗೆ ಹೈಕೋರ್ಟ್ ನೀಡಿರುವ ಆದೇಶ ಸ್ಪಷ್ಟವಾಗಿದೆ. ಇದೇ ಆದೇಶ ಸರ್ಕಾರಿ ಮತ್ತು ಖಾಸಗಿ ಪಿಯುಸಿ, ಡಿಗ್ರಿ ಕಾಲೇಜುಗಳಿಗೂ ಅನ್ವಯವಾಗಲಿದೆ ಎಂದು ಹೇಳಿದ್ದಾರೆ.
ಮತ್ತೊಂದು ಟ್ವೀಟರ್ ನಲ್ಲಿ ಪದವಿ ಪೂರ್ವ, ಪದವಿ ಕಾಲೇಜುಗಳ ಕಾಲೇಜು ಅಭಿವೃದ್ಧಿ ಮಂಡಳಿ ಸೂಚಿಸಿರುವ ವಸ್ತ್ರ ಸಂಹಿತೆಯನ್ನು ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಪಾಲಿಸಬೇಕು. ವಸ್ತ್ರ ಸಂಹಿತೆ ಅಳವಡಿಸಿಕೊಳ್ಳದ ಕಾಲೇಜುಗಳ ವಿದ್ಯಾರ್ಥಿಗಳು ಈ ಹಿಂದಿನ ನಿಯಮಾನುಸಾರ ತರಗತಿಗಳಿಗೆ ಹಾಜರಾಗಬೇಕು. ನ್ಯಾಯಾಲಯದ ಮಧ್ಯಂತರ ತೀರ್ಪನ್ನು ಕಡ್ಡಾಯವಾಗಿ ಪಾಲಿಸಿ ಮುನ್ನಡೆಯೋಣ ಎಂದಿದ್ದಾರೆ.