ಉಡುಪಿ: ಹಿಜಾಬ್ ಧರಿಸಲು ಅನುಮತಿ ನೀಡುವಂತೆ ಒತ್ತಾಯಿಸಿ ಹೋರಾಟ ನಡೆಸಿದ ಕುಂದಾಪುರದ ಸರಕಾರಿ ಪಿಯು ಕಾಲೇಜಿನ 23 ವಿದ್ಯಾರ್ಥಿಗಳು ಹಾಗೂ ಉಡುಪಿಯ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ 6 ಜನ ವಿದ್ಯಾರ್ಥಿನಿಯರು ಇಂದು ತರಗತಿಗೆ ಗೈರು ಹಾಜರಾಗಿದ್ದಾರೆ. ಇದೇ ವೇಳೆ ಇಲ್ಲಿನ ಎಂಜಿಎಂ ಕಾಲೇಜಿನ ಪಿಯು ತರಗತಿಗೆ ಇಂದು ರಜೆ ಘೋಷಿಸಲಾಗಿದೆ.
ಕುಂದಾಪುರದಲ್ಲಿ ಕಳೆದ ಬಾರಿ 23 ವಿದ್ಯಾರ್ಥಿನಿಯರು ಧರಣಿ ನಡೆಸಿದಾಗ ಪ್ರತ್ಯೇಕ ಕೊಠಡಿಯಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಅವರನ್ನು ಗೇಟ್ ಹೊರಗೆ ಕಳುಹಿಸಿದಾಗ, ವಿವಾದ ಹುಟ್ಟಿಕೊಂಡಿತು.
ಇನ್ನು ಹಿಜಾಬ್ ವಿವಾದ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಲು ಕಾರಣವಾಗಿದ್ದ ಉಡುಪಿಯಲ್ಲಿ ತರಗತಿಯೊಳಗೆ ಹಿಜಾಬ್ ಧರಿಸುವ ಹಕ್ಕನ್ನು ಪ್ರತಿಪಾದಿಸಿ ತೀವ್ರ ಹೋರಾಟ ನಡೆಸಿದ ಆರು ಮುಸ್ಲಿಂ ವಿದ್ಯಾರ್ಥಿನಿಯರು ಇಂದು ತರಗತಿಯಿಂದ ದೂರ ಉಳಿದಿದ್ದಾರೆ. ವಿದ್ಯಾರ್ಥಿನಿಯರ ಗೈರು ಹಾಜರಿ ಬಗ್ಗೆ ಕಾಲೇಜಿನ ಪ್ರಾಂಶುಪಾಲ ರುದ್ರೇಗೌಡ ಈ ಮಾಹಿತಿ ನೀಡಿದ್ದಾರೆ.
ಕಾಲೇಜಿಗೆ ಹಾಜರಾದ ಇತರ ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ಬುರ್ಖಾ ಮತ್ತು ಹಿಜಾಬ್‌ಗಳನ್ನು ಸರಿಯಾಗಿ ತೆಗೆದು ತರಗತಿಯೊಳಗೆ ಕುಳಿತರು. ತರಗತಿಗಳು ಎಂದಿನಂತೆ ನಡೆಯುತ್ತಿವೆ.
ಅಜ್ಜರಕಾಡು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಂದುವರಿದ ಗೊಂದಲ:
ಅಜ್ಜರಕಾಡು ಡಾ ಜಿ ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು (ಪದವಿ) ಇಂದು ಪ್ರಾರಂಭವಾದಾಗ ಹಿಜಾಬ್ ಗೊಂದಲ ಮುಂದುವರಿದಿದೆ. ಸುಮಾರು 20 ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಹಿಜಾಬ್ ಹಾಕದೆ ತರಗತಿಯಲ್ಲಿ ಕುಳಿತುವಂತೆ ಪ್ರಾಂಶುಪಾಲರ ನಿರ್ದೇಶನ ನೀಡಿದ್ದಾರೆ.
ಕಾಲೇಜು ಆಡಳಿತ ಮಂಡಳಿ ನಮ್ಮ ಪರವಾಗಿದ್ದೂ,ನಾವು ಕಾಲೇಜು ನಿರ್ಧಾರವನ್ನು ಗೌರವಿಸುತ್ತೇವೆ. ಆನ್ ಲೈನ್ ತರಗತಿ ಮಾಡುವ ಭರವಸೆ ನೀಡಿದ್ದಾರೆ. ಕೋರ್ಟ್ ನಿರ್ಧಾರದಿಂದ ಈ ಗೊಂದಲ ಶುರುವಾಗಿದೆ.ನಾವು ಯಾರು ಕಾಲೇಜು ವಿರುದ್ದ ಪ್ರತಿಭಟನೆ ಮಾಡುತ್ತಿಲ್ಲ.ಆಡಳಿತ ಮಂಡಳಿಯೂ ಸೌಜನ್ಯಯುತವಾಗಿ ಹಿಜಾಬ್ ತೆಗೆದು ಕಾಲೇಜು ಒಳಗೆ ಬರುವಂತೆ ಕೇಳಿಕೊಂಡಿದ್ದಾರೆ. ಆದರೆ ಇವತ್ತು ತರಗತಿಗೆ ಹಾಜರಾಗುವುದಿಲ್ಲ ಮನೆಗೆ ತೆರಳುತ್ತೇವೆ ಎಂದು ಹಲವು ವಿದ್ಯಾರ್ಥಿನಿಯರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
” ಕೋರ್ಟ್ ಆದೇಶದ ಪ್ರಕಾರ ಮಕ್ಕಳಿಗೆ ಹಿಜಾಬ್ ಧರಿಸಲು ಅವಕಾಶ ಇರಲಿಲ್ಲ ಹೀಗಾಗಿಇದನ್ನು ವಿದ್ಯಾರ್ಥಿನಿಯರಿಗೆ ಮನವರಿಕೆ ಮಾಡಿದ್ದೇವೆ. ಕೋರ್ಟ್ ಆದೇಶ ಬರುವವರೆಗೆ ಕಾಯುವುದಾಗಿ ವಿದ್ಯಾರ್ಥಿನಿಯರು ತಿಳಿಸಿದ್ದಾರೆ. ಕಾಲೇಜಿನಲ್ಲಿ ಒಟ್ಟು 2326 ವಿದ್ಯಾರ್ಥಿನಿಯರಿದ್ದು 196 ಮಂದಿ ಮುಸ್ಲಿಂ ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ ಸದ್ಯ 40 ಮಂದಿ ಮಾತ್ರ ಹಿಜಾಬ್ ತೆಗೆಯಲು ಒಪ್ಪಿಲ್ಲ. ಅವರೇ ಸ್ವಯಂಪ್ರೇರಿತರಾಗಿ ಮನೆಗೆ ತೆರಳುವ ನಿರ್ಧಾರ ತೆಗೆದುಕೊಂಡಿದ್ದೇವೆ.
2010 ರಿಂದ ಸಮವಸ್ತ್ರ ಆರಂಭವಾಗಿತ್ತು. ಕಾಲೇಜು ಕ್ಯಾಂಪಸ್ ನಲ್ಲಿ ಹಿಜಾಬ್ ಹಾಕಿಕೊಂಡು ತಿರುಗಾಡಲು ಅವಕಾಶ ಕೊಟ್ಟಿದ್ದೇವೆ. ತರಗತಿ ಬಾರದ ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಮಾಡುವ ತೀರ್ಮಾನ ತೆಗೆದುಕೊಳ್ಳುತ್ತೇವೆ.ಹೈಕೋರ್ಟ್ ಬಂದ ಮೇಲೆ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ. ಅಲ್ಲಿಯವರೆಗೆ ಯಥಾಸ್ಥಿತಿ ಕಾಪಾಡುತ್ತೇವೆ.