ಕೋಲಾರ: ಕೊರೊನಾ ತಜ್ಞರು ವರದಿ ಕೊಟ್ಟಿದ್ದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಈ ಸರ್ಕಾರ ಸತ್ತೇ ಹೋಗಿದೆ. ಸರ್ಕಾರದ ಬಳಿ ಬರೀ ಸುಳ್ಳಿನ ಕಂತೆಯೇ ತುಂಬಿದೆ. ರಾಜ್ಯದಲ್ಲಿ ಯಡಿಯೂರಪ್ಪರಂತಹ ಮುಖ್ಯಮಂತ್ರಿಯನ್ನು ನೋಡೇ ಇಲ್ಲ. ಇಂತಹ ಮಾನಗೆಟ್ಟ ಸರ್ಕಾರ, ಸಚಿವರನ್ನು ಇಲ್ಲಿವರೆಗೂ ನೋಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೋಲಾರ ಜಿಲ್ಲೆ ಕೆಜಿಎಫ್ ನಗರದ ಮುನ್ಸಿಪಲ್ ಮೈದಾನದಲ್ಲಿ ನಡೆದ ಫುಡ್ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಾಜ್ಯ ಸರ್ಕಾರಕ್ಕೆ ಕೊರೊನಾ ಎರಡನೇ ಅಲೆ ಬರುವ ಮುನ್ಸೂಚನೆ ಇದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ಸುಳ್ಳೇ ಅವರ ಮನೆ ದೇವರು, ಸರ್ಕಾರ ನಡೆಸಕ್ಕಾಗಲ್ಲ ಎಂದರೆ ಬಿಟ್ಟು ಹೋಗಿ ಎಂದಿದ್ದೆ. ಆದರೆ ಬಿಟ್ಟು ಹೋಗಿಲ್ಲ ಇಂತಹ ಸತ್ತಿರುವ ಸರ್ಕಾರವನ್ನು ನಾನು ನೋಡಿರಲಿಲ್ಲ ಎಂದು ಗುಡುಗಿದ್ದಾರೆ.
ನಮಗೆ ಆಕ್ಸಿಜನ್ 1700 ಮೆಟ್ರಿಕ್ ಟನ್ ಬೇಕು. ಅಷ್ಟು ನಮಗೆ ಸಿಗುತ್ತಿಲ್ಲ. ಯಡಿಯೂರಪ್ಪ ಒಬ್ಬ ಅಸಮರ್ಥ ಮುಖ್ಯಮಂತ್ರಿ. ಇಂಥ ಬಂಡರನ್ನು ನೋಡಿಲ್ಲ, ನಿಮ್ಮ ಕೈಲಿ ಆಗೋದಿಲ್ಲ ಅಂದ್ರೆ ಬಿಡಿ. ನೀವು ಅದನ್ನು ಮಾಡುತ್ತಿಲ್ಲ. ನಾವಾದ್ರು ಬಂದು ಏನಾದ್ರು ಮಾಡುತ್ತೇವೆ ಎಂದು ಲೇವಡಿ ಮಾಡಿದರು.
ಚಾಮರಾಜನಗರ ಆಕ್ಸಿಜನ್ ದುರಂತ ಕುರಿತು ಮಾತನಾಡಿದ ಸಿದ್ದರಾಮಯ್ಯ, ವೈದ್ಯರು ಎಂಬ ಒಬ್ಬ ಹೆಲ್ತ್ ಮಿನಿಸ್ಟರ್ ಇದ್ದಾನೆ. 28 ಮಂದಿ ಸತ್ತಿದ್ದಾರೆ ಎಂದರೂ ಸಚಿವರು 3 ರ ಒಳಗೇ ಸುತ್ತುತ್ತಿದ್ದಾರೆ. ಈ ಸರ್ಕಾರ ಬರಿ ಸುಳ್ಳು ಹೇಳುತ್ತಾ ಕಾಲ ಕಳೆಯುತ್ತಿದೆ ಎಂದು ಟೀಕಿಸಿದರು.
ಕೊರೊನಾ ಹಳ್ಳಿಗಳಿಗೂ ಹಬ್ಬಿದೆ. ಹಾಗಾಗಿ ಪ್ರತಿಯೊಬ್ಬರು ಎಚ್ಚರಿಕೆಯಿಂದ ಇರಬೇಕು. ರೋಗವನ್ನ ತಡೆಗಟ್ಟಬೇಕು ಎಂದರೆ ಎಲ್ಲರೂ ವ್ಯಾಕ್ಸಿನ್ ಮಾಡಿಸಿಕೊಳ್ಳಬೇಕು. ಕೊರೊನ ನಿಯಮ ಪಾಲಿಸಬೇಕು ಎಂದು ಜನತೆಗೆ ಮನವಿ ಮಾಡಿಕೊಂಡರು.