ನವದೆಹಲಿ : ದೇಶದ ಭದ್ರತೆಯ ಕಾರಣ ನೀಡಿ 54 ಚೀನಿ ಅಪ್ಲಿಕೇಶನ್‌ಗಳನ್ನು ನಿಷೇಧಿಸಿರುವುದಾಗಿ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಇಂದು ತಿಳಿಸಿದೆ.
ಕಳೆದ ವರ್ಷ ಜೂನ್‌ನಲ್ಲಿ, ರಾಷ್ಟ್ರದ ಸಾರ್ವಭೌಮತ್ವ ಮತ್ತು ಭದ್ರತೆಗೆ ಬೆದರಿಕೆಯನ್ನು ಉಲ್ಲೇಖಿಸಿ ಭಾರತವು ಟಿಕ್‌ಟಾಕ್, ವಿಚಾಟ್ ಮತ್ತು ಹೆಲೋನಂತಹ ವ್ಯಾಪಕವಾಗಿ ಬಳಸಲಾಗುವ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು, ಪಬ್ಜಿಯಂತಹ ಜನಪ್ರಿಯ ಗೇಮಿಂಗ್ ಅಪ್ಲಿಕೇಶನ್‌ಗಳು ಸೇರಿದಂತೆ 59 ಚೀನೀ ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧಿಸಿತ್ತು. ಪ್ರಸ್ತುತ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ಎ ಅಡಿಯಲ್ಲಿ ಅಪ್ಲಿಕೇಶನ್‌ಗಳನ್ನು ನಿಷೇಧಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಬ್ಯೂಟಿ ಕ್ಯಾಮೆರಾ, ಸ್ವೀಟ್ ಸೆಲ್ಫಿ ಎಚ್ಡಿ, ಬ್ಯೂಟಿ ಕ್ಯಾಮೆರಾ – ಸೆಲ್ಫಿ ಕ್ಯಾಮೆರಾ, ಈಕ್ವಲೈಜರ್ ಮತ್ತು ಬಾಸ್ ಬೂಸ್ಟರ್, ಕ್ಯಾಮ್ಕಾರ್ಡ್ ಫಾರ್ ಸೇಲ್ಸ್ಫೋರ್ಸ್ ಎಂಟ್, ಐಸೊಲ್ಯಾಂಡ್ 2: ಆಶಸ್ ಆಫ್ ಟೈಮ್ ಲೈಟ್, ವಿವಸೆಂಟ್ ವಿಡಿಯೋ ಎಡಿಟರ್, ಟೆನ್ವಾ ಎಕ್ಸ್ರಿವರ್, ಟೆನ್ವಾ ಎಕ್ಸ್ರಿವರ್, ಒನ್ಮೆಯಾಜಿ ಚೆಸ್, ಒನ್ಮೆಯಾಜಿ ಅರೆನಾ, ಆಪ್ ಲಾಕ್ ಮತ್ತು ಡ್ಯುಯಲ್ ಸ್ಪೇಸ್ ಲೈಟ್ ಸೇರಿದಂತೆ 54 ಚೀನಿ ಆಪ್‌ಗಳನ್ನು ನಿಷೇಧಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ತಿಳಿಸಿದೆ.
ಚೀನಾದೊಂದಿಗೆ ಗಡಿ ವಿವಾದ ಉದ್ವಿಗ್ನಗೊಂಡ ನಂತರ ಭಾರತವು ಕಳೆದ ಒಂದು ವರ್ಷದಿಂದ ಸುಮಾರು 300 ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಿದೆ. ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗಿನ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಸಾವನ್ನಪ್ಪಿದ ನಂತರ ಜೂನ್ 2020ರಲ್ಲಿ ಮೊದಲ ಸುತ್ತಿನ ನಿಷೇಧವನ್ನು ಘೋಷಿಸಲಾಯಿತು.
ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ವಕ್ತಾರರು ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿಲ್ಲ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.