ಸಮಗ್ರ ನ್ಯೂಸ್ ಡೆಸ್ಕ್: ಬಂಟ್ವಾಳ ತಾಲೂಕಿನ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಆಸುಪಾಸಿನ 3 ಕಲ್ಲು ಗಣಿಗಾರಿಕೆ ಚಟುವಟಿಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟನೆ ಹೊರಡಿಸಿರುವ ಸಚಿವರು ಸ್ಥಳೀಯರ ಹಾಗೂ ದೇವಸ್ಥಾನದ ಭಕ್ತಾಧಿಗಳ ದೂರಿನ ಹಿನ್ನೆಲೆಯಲ್ಲಿ 2007ರಿಂದ ಈ ಪ್ರದೇಶದಲ್ಲಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆಯನ್ನು ಸ್ಥಗಿತಗೊಳಿಸಲಾಗಿದೆ. ಕಾವಳ ಮುಡೂರು ಗ್ರಾಮದ ಸರ್ವೆ ನಂ. 164/2ಪಿ1 ರಲ್ಲಿ 0.50 ಎಕರೆ ಮತ್ತು 172/2ಪಿ1 ರಲ್ಲಿ 0.50 ಎಕರೆ ಸಹಿತ 1ಎಕರೆ ಪ್ರದೇಶದಲ್ಲಿ 2007ರಿಂದ ಗಣಿಗಾರಿಕೆ ನಡೆಯುತ್ತಿತ್ತು. ತನ್ನ ಪರವಾನಿಗೆಯ ವ್ಯಾಪ್ತಿ ಮೀರಿ 3.28 ಎಕ್ರೆ ಪ್ರದೇಶದಲ್ಲಿ ಅಕ್ರಮವಾಗಿ ಗಣಿಗಾರಿಕೆ ಮಾಡಿರುವ ಹಿನ್ನೆಲೆಯಲ್ಲಿ 8,12,87,198 ರೂ. ದಂಡ ಪಾವತಿಸುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸೂಚಿಸಿತ್ತು. ದಂಡ ಪಾವತಿಸದ ಕಾರಣ ಸದ್ರಿ ಗಣಿಗಾರಿಕೆಯನ್ನು 2021ರ ಡಿಸೆಂಬರ್‌ನಲ್ಲಿ ಸ್ಥಗಿತಗೊಳಿಸಲಾಗಿದೆ ಹಾಗೂ ಅನಧಿಕೃತ ಗಣಿಗಾರಿಕೆ ನಡೆಸಿರುವ ಮಾಲಕರ ವಿರುದ್ಧ ಬಂಟ್ವಾಳ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿದೆ ಎಂದು ತಿಳಿಸಿದ್ದಾರೆ.
ಕಾವಳ ಪಡೂರು ಗ್ರಾಮದ ಸ.ನಂ 121/2ಪಿ1ರಲ್ಲಿ 1ಎಕರೆ ವಿಸ್ತೀರ್ಣದಲ್ಲಿ 2016ರಿಂದ ಆರಂಭಗೊಂಡಿದ್ದ ಗಣಿಗಾರಿಕೆಗೆ 20 ವರ್ಷಗಳ ಪರವಾನಿಗೆ ಇದ್ದರೂ ಕೂಡ ಗುತ್ತಿಗೆದಾರರು ಗೋಮಾಳ ಜಾಗವನ್ನು ಅತಿಕ್ರಮಿಸಿ ಗಣಿಗಾರಿಕೆ ನಡೆಸುತ್ತಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಸದ್ರಿ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲಾಗಿದೆ. ಸ.ನಂ 122/3ಪಿ1ರಲ್ಲಿ 1ಎಕರೆ ಜಮೀನಿನಲ್ಲಿ 2015ರಿಂದ ಆರಂಭಗೊಂಡಿದ್ದ ಗಣಿಗಾರಿಕೆಯ ಗುತ್ತಿಗೆದಾರರು ಮೃತಪಟ್ಟಿದ್ದರೂ ಆ ಪ್ರದೇಶದಲ್ಲಿ ಅನಧಿಕೃತವಾಗಿ ಬೇರೆ ವ್ಯಕ್ತಿ ಗಣಿಗಾರಿಕೆ ಮಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಈ ಗಣಿಗಾರಿಕೆಯನ್ನೂ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ದೇವಸ್ಥಾನದ ಪರಿಸರವನ್ನು ಅತೀ ಸೂಕ್ಷ್ಮ ವಲಯ ಎಂದು ಘೋಷಣೆ ಮಾಡುವ ಬಗ್ಗೆ ಈಗಾಗಲೇ ಸರಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಭಕ್ತಾಧಿಗಳ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವ ಬಗ್ಗೆ ಸರಕಾರದ ಹಂತದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.