ಸಮಗ್ರ ನ್ಯೂಸ್ ಡೆಸ್ಕ್: ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಸಭೆ ಕರೆಯುವ ಮತ್ತು ವ್ಯವಹಾರ ನೋಡಿಕೊಳ್ಳುವ ಪ್ರಧಾನ ಕಾರ್ಯದರ್ಶಿಯ ಅಧಿಕಾರಕ್ಕೆ ತೊಂದರೆ ಕೊಡಬಾರದು ಮತ್ತು ನ್ಯಾಯಾಲಯದಲ್ಲಿ ದಾವೆ ಇತ್ಯರ್ಥವಾಗುವ ವರೆಗೆ ಪ್ರಧಾನ ಕಾರ್ಯದರ್ಶಿಯನ್ನು ಬದಲಾಯಿಸಬಾರದು ಎಂದು ಹೈಕೋರ್ಟ್ ಆದೇಶವಿದ್ದರೂ ಅದನ್ನು ಉಲ್ಲಂಘಿಸಿ ಜತೆ ಕಾರ್ಯದರ್ಶಿಯ ಮೂಲಕ ಅಕಾಡೆಮಿಯ ಸಭೆ ಕರೆಯಲು ಪ್ರಯತ್ನಿಸಲಾಗಿದೆ ಹಾಗೂ ಜತೆ ಕಾರ್ಯದರ್ಶಿಗೆ ಕಾರ್ಯದರ್ಶಿಯ ಜವಾಬ್ದಾರಿ ನೀಡುವ ಅಜೆಂಡಾವನ್ನು ಇರಿಸಿ ನ್ಯಾಯಾಲಯದ ತೀರ್ಪನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿ ಡಾ.ರೇಣುಕಾಪ್ರಸಾದ್ ಕೆ.ವಿ. ಯವರು ಅಕಾಡೆಮಿಯ ಅಧ್ಯಕ್ಷರಾದ ಡಾ.ಕೆ ವಿ. ಚಿದಾನಂದರು ಮತ್ತು ಇತರ ಐವರ ಮೇಲೆ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ನ್ಯಾಯಾಲಯ ನಿಂದನಾ ದಾವೆ ಹೂಡಿದ್ದು, ಆ ಹಿನ್ನೆಲೆಯಲ್ಲಿ ಹೈಕೋರ್ಟು ಅಕಾಡೆಮಿ ಅಧ್ಯಕ್ಷ ಡಾ।ಕೆ.ವಿ.ಚಿದಾನಂದ ಹಾಗೂ ಇತರ ಐವರು ಪ್ರತಿವಾದಿಗಳಿಗೆ ನೋಟೀಸು ಜಾರಿ ಮಾಡಿರುವುದಾಗಿ ತಿಳಿದುಬಂದಿದೆ.
ರಾಜ್ಯ ಉಚ್ಛ ನ್ಯಾಯಾಲಯವು 3.12.2021 ರಂದು ಆದೇಶ ಹೊರಡಿಸಿ ” ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಪ್ರಧಾನ ಕಾರ್ಯದರ್ಶಿ ಡಾ। ರೇಣುಕಾಪ್ರಸಾದ್ ಕೆ.ವಿ.ಯವರ ಅಧಿಕಾರಕ್ಕೆ ತೊಂದರೆ ನೀಡಬಾರದು ಹಾಗೂ ದಾವೆ ಇತ್ಯರ್ಥವಾಗುವ ವರೆಗೆ ಅವರನ್ನು ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ತೆಗೆಯಬಾರದು” ಎಂದು ಮಧ್ಯಂತರ ಆದೇಶ ಮಾಡಿತ್ತು. ಆದರೂ ಅಧ್ಯಕ್ಷ ಡಾ। ಕೆ.ವಿ.ಚಿದಾನಂದರು ಮತ್ತು ಜತೆ ಕಾರ್ಯದರ್ಶಿ ಕೆ.ವಿ.ಹೇಮನಾಥರವರು ಅಕಾಡೆಮಿಯ ಸಭೆಯನ್ನು 12. 2. 2022 ರಂದು ಕರೆದಿದ್ದಾರೆ ಹಾಗೂ ಕಾರ್ಯದರ್ಶಿಯ ಜವಾಬ್ದಾರಿಯನ್ನು ಜತೆ ಕಾರ್ಯದರ್ಶಿಗೆ ವಹಿಸುವ ಅಜೆಂಡ ಇರಿಸಿದ್ದಾರೆಂದು ಡಾ।ಕೆ.ವಿ.ರೇಣುಕಾಪ್ರಸಾದರು ಹೈಕೋರ್ಟು ಮೆಟ್ಟಿಲೇರಿದ್ದರು.
” ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ। ಕೆ.ವಿ.ಚಿದಾನಂದ, ಅಕಾಡೆಮಿಯ ಜತೆ ಕಾರ್ಯದರ್ಶಿ ಕೆ.ವಿ.ಹೇಮನಾಥ್, ಅಕಾಡೆಮಿ ನಿರ್ದೇಶಕಿ ಶ್ರೀಮತಿ ಶೋಭಾ ಚಿದಾನಂದ, ಡಾ। ಚಿದಾನಂದರ ಪುತ್ರ ಅಕ್ಷಯ್ ಕೆ.ಸಿ., ಡಾ।ಚಿದಾನಂದರ ಪುತ್ರಿ ಡಾ।ಐಶ್ವರ್ಯಾ ಮತ್ತು ಡಾ।ಚಿದಾನಂದರ ಅಳಿಯ ಡಾ। ಗೌತಮ್ ಅವರನ್ನು ಪ್ರತಿವಾದಿಗಳನ್ನಾಗಿ ಅವರು ಮಾಡಿದ್ದರು. ಅಕಾಡೆಮಿಯ ಒಪ್ಪಿಗೆ ಇಲ್ಲದೆ ಅಕಾಡೆಮಿಯ ನಿರ್ದೇಶಕರಾಗಿ ಮಾಡಲಾಗಿದ್ದ ಮೂವರಾದ ಅಕ್ಷಯ್ ಕೆ.ಸಿ., ಡಾ।ಐಶ್ವರ್ಯ ಹಾಗೂ ಡಾ।ಗೌತಮ್ ರನ್ನು ಒಮ್ಮೆ ನ್ಯಾಯಾಲಯದ ಆದೇಶದಂತೆ ಕೈ ಬಿಡಲಾಗಿದ್ದರೂ ಮತ್ತೆ ಅವರನ್ನು ಸೇರಿಸಿಕೊಂಡು ಸಭೆ ಕರೆಯಲಾಗಿದೆ ಎಂದೂ ರೇಣುಕಾಪ್ರಸಾದರು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ರೇಣುಕಾ ಪ್ರಸಾದರು ಹೂಡಿರುವ ದಾವೆಯನ್ನು ಗಂಭೀರವಾಗಿ ಪರಿಗಣಿಸಿರುವ ಉಚ್ಛ ನ್ಯಾಯಾಲಯವು ಫೆ.12ರಂದು 6 ಮಂದಿ ಪ್ರತಿವಾದಿಗಳಿಗೆ ನೋಟೀಸ್ ಜಾರಿ ಮಾಡಿ ಫೆ.22ರಂದು ನ್ಯಾಯಾಲಯದ ಮುಂದೆ ಹಾಜರಾಗಲು ತಿಳಿಸಿದೆ.
ಡಾ।ರೇಣುಕಾಪ್ರಸಾದ್ ಪರವಾಗಿ ಬೆಂಗಳೂರಿನ ಖ್ಯಾತ ವಕೀಲರಾದ ಎಂ.ಎಸ್.ಶ್ಯಾಮ್ ಸುಂದರ್ ಮತ್ತು ಜಯ ಕುಮಾರ್ ಎಸ್.ಪಾಟೀಲ್ ವಾದಿಸಿದ್ದರು.
ಫೆ.11 ರಂದು ನ್ಯಾಯಾಲಯ ನೋಟೀಸ್ ಜಾರಿ ಮಾಡಿದ ಕಾರಣ ಫೆ. 12 ರಂದು ಏರ್ಪಡಿಸಲಾಗಿದ್ದ ಅಕಾಡೆಮಿ ಸಭೆ ನಡೆದಿಲ್ಲವೆಂದು ತಿಳಿದುಬಂದಿದೆ.