ಸಮಗ್ರ ನ್ಯೂಸ್ ಡೆಸ್ನ್: ಹಿಜಾಬ್ ವಿವಾದಕ್ಕೆ ಖ್ಯಾತ ಲೇಖಕಿ ತಸ್ಲೀಮಾ ನಸ್ರೀನ್ ಪ್ರತಿಕ್ರಿಯೆ ನೀಡಿದ್ದು, ಯಾವುದೇ ಶಿಕ್ಷಣ ಸಂಸ್ಥೆ ಸಮವಸ್ತ್ರ ಕಡ್ಡಾಯಗೊಳಿಸುವುದು ತಪ್ಪಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಎಲ್ಲೆಡೆ ಸುದ್ದಿಯಾಗುತ್ತಿರುವ ಈ ಹಿಜಾಬ್ ವಿವಾದದ ಕುರಿತು ಸಿಡಿದೆದ್ದ ಲೇಖಕಿ ತಸ್ಲೀಮಾ, “ಜಾತ್ಯತೀತ ದೇಶದಲ್ಲಿ ಧಾರ್ಮಿಕತೆಗೆ ಅನುಗುಣವಾದ ಬಟ್ಟೆಗಳನ್ನು ಮನೆಗಳಲ್ಲಿ ಧರಿಸಬೇಕೇ ಹೊರತು ಶಾಲೆಗಳಿಗಲ್ಲ. ಶಿಕ್ಷಣ ಸಂಸ್ಥೆಗಳು ಕಡ್ಡಾಯ ಸಮವಸ್ತ್ರ ಮಾಡಿರುವುದು ಸರಿಯಾಗಿದೆ. ಶಿಕ್ಷಣ ಸಂಸ್ಥೆಗಳು ಇರುವುದು ಜ್ಞಾನಾರ್ಜನೆಗಾಗಿಯೇ ಹೊರತು, ತಮ್ಮ ಧರ್ಮದ ನಿಲುವನ್ನು ಪ್ರತಿಪಾದಿಸಲು ಅಲ್ಲ” ಎಂದಿದ್ದಾರೆ.
“ಶಿಕ್ಷಣದಿಂದ ಮಾತ್ರ ಒಬ್ಬ ವ್ಯಕ್ತಿ ಧರ್ಮಾಂಧತೆ, ಮೂಢನಂಬಿಕೆಗಳಿಂದ ಹೊರಬಂದು ಮುಕ್ತ ಚಿಂತನೆ ಹಾಗೂ ವೈಚಾರಿಕತೆಯ ಮೌಲ್ಯವನ್ನು ಜಗತ್ತಿಗೆ ಸಾರಬಲ್ಲ ಒಂದು ವ್ಯವಸ್ಥೆ. ಇಲ್ಲಿ ನಮ್ಮ ಧರ್ಮ ಹಾಗೂ ಅದರ ಉಡುಪುಗಳನ್ನು ಪ್ರತಿನಿಧಿಸುವ ಸ್ಥಳವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.”
ʼʼಒಬ್ಬ ಹೆಣ್ಣು ತನ್ನನ್ನು ಬುರ್ಖಾ, ಹಿಜಾಬ್ ಅಥವಾ ನಿಖಾಬ್ ನಿಂದ ಆಕೆಯ ದೇಹವನ್ನು ಮುಚ್ಚಿಕೊಳ್ಳಬೇಕು ಅನ್ನೋದು ಆಕೆಯ ಧರ್ಮದ ಹಕ್ಕಲ್ಲ, ಅದು ಆಕೆಯನ್ನ ಪುರುಷರು ಕೇವಲ ಲೈಂಗಿಕ ವಸ್ತುವನ್ನಾಗಿ ನೋಡುವಂತದ್ದು. ಆಕೆ ಇಂತಹ ಅಧೀನತೆ ಸಂಕೋಲೆಯಿಂದ ಮುಕ್ತಳಾಗಬೇಕು ಇಲ್ಲವಾದರೇ ಇದು ಯಾರಿಗೂ ಶೋಭೆ ತರುವಂತಹದ್ದಲ್ಲʼʼ ಎಂದು ಹಿಜಾಬ್ ವಿವಾದದ ವಿರುದ್ಧ ನಸ್ರೀನ್ ಸಿಡಿದೆದ್ದಿದ್ದಾರೆ.