ಸಮಗ್ರ ನ್ಯೂಸ್ ಡೆಸ್ಕ್: ಕಾಲೇಜಿನ ತರಗತಿಯೊಳಗೆ ಹಿಜಾಬ್ ಧರಿಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಪ್ರಕರಣದ ಮುಂದಿನ ವಿಚಾರಣೆಯನ್ನು ಫೆ.14ಕ್ಕೆ ಮುಂದೂಡಿದೆ. ಅಲ್ಲಿಯವರೆಗೆ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಯಾವುದೇ ಧಾರ್ಮಿಕ ಗುರುತುಗಳನ್ನು ಬಳಸಬಾರದು ಎಂದು ಸೂಚಿಸಿದೆ.
ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವವರೆಗೆ ಹಿಜಾಬ್, ಕೇಸರಿ ಶಾಲು ಎರಡೂ ಬೇಡ ಎಂದು ಹೈಕೋರ್ಟ್ ಹೇಳಿದೆ. ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸಚಿವರೊಂದಿಗೆ ಸಭೆ ನಡೆಸಿದರು.
ಸಭೆ ಬಳಿಕ ಮಾತನಾಡಿದ ಸಿಎಂ, ಸೋಮವಾರದಿಂದ ಶಾಲೆಗಳು ಸಂಪೂರ್ಣವಾಗಿ ಆರಂಭವಾಗಲಿದೆ ಎಂದು ತಿಳಿಸಿದರು. 1 ರಿಂದ 10ನೇ ತರಗತಿಯ ಮಕ್ಕಳು ಶಾಲೆಗೆ ಹಾಜರಾಗಬೇಕು. ಎರಡನೇ ಹಂತದಲ್ಲಿ ಪಿಯು ನಂತರದ ತರಗತಿಗಳು ಆರಂಭದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತೆ ಎಂದು ತಿಳಿಸಿದರು. ಕಾಲೇಜುಗಳು ಆರಂಭವಾಗುವ ಬಗ್ಗೆ ನಾಳೆ ನಿರ್ಧಾರ ಪ್ರಕಟಿಸುವುದಾಗಿ ಹೇಳಿದರು.
ಕಳೆದ ಕೆಲ ದಿನದಿಂದ ಶಾಲೆ ಡ್ರಸ್ ಕೋಡ್ ಶುರುವಾಗಿದ್ದು ಅದು ಹೈ ಕೋರ್ಟ್ ಮೆಟ್ಟಿಲೇರಿತ್ತು. ಶಾಲಾ ಮಕ್ಕಳು ಸಂಯಮದಿಂದ ವರ್ತಿಸಿದ್ದಾರೆ, ಅವರಿಗೆ ಅಭಿನಂದನೆಗಳು ಎಂದು ಸಿಎಂ ತಿಳಿಸಿದರು. ನ್ಯಾಯಾಲಯ ಸೂಚನೆ ಗೌರವಿಸುತ್ತೇವೆ. ಪಿಯು ನಂತರದ ತರಗತಿ ಪ್ರಾರಂಭ ಸಂಬಂಧ ನಾಳೆ ಸಂಜೆ ಸಚಿವರ ಜೊತೆ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ಮಾಡಲಾಗುತ್ತೆ. ನಾಳೆ ಎಲ್ಲಾ ಡಿಸಿ,ಎಸ್ಪಿ ಸಭೆ ಮಾಡಿ ಜಿಲ್ಲೆಗಳಲ್ಲಿನ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆಯಲಾಗುವುದು, ಶಿಕ್ಷಣ ಹಾಗೂ ಗೃಹ ಇಲಾಖೆ ಜೊತೆ ಸಭೆ ಮಾಡಲಾಗುವುದು ಎಂದು ಸಿಎಂ ಹೇಳಿದರು.