ಸಮಗ್ರ ನ್ಯೂಸ್ ಡೆಸ್ಕ್: ಪತ್ರಕರ್ತರು ದೇಶದ ಭದ್ರತೆ, ಸಾರ್ವಭೌಮತೆ ಹಾಗೂ ಸಮಗ್ರತೆಗೆ ವ್ಯತಿರಿಕ್ತವಾಗಿ ನಡೆದುಕೊಂಡರೆ ಅವರಿಗೆ ಸರ್ಕಾರದಿಂದ ನೀಡಿರುವ ಮಾನ್ಯತೆ ರದ್ದುಪಡಿಸುವುದಾಗಿ ಕೇಂದ್ರ ಸರ್ಕಾರ ಹೊಸ ನಿಯಮಾವಳಿ ಪ್ರಕಟಿಸಿದೆ.
ಸಾರ್ವಜನಿಕ ಶಿಸ್ತು, ನೈತಿಕತೆ, ಗೌರವ, ವಿದೇಶಗಳೊಂದಿಗಿನ ಸಂಬಂಧಕ್ಕೆ ಅಪಚಾರ ಎಸಗಿದರೂ ಮಾನ್ಯತೆ ರದ್ದಾಗಲಿದೆ. ಜೊತೆಗೆ, ನ್ಯಾಯಾಂಗ ನಿಂದನೆ, ಮಾನನಷ್ಟಅಥವಾ ಅಪರಾಧಕ್ಕೆ ಪ್ರಚೋದನೆ ನೀಡುವಂತಹ ಪ್ರಕರಣಗಳಲ್ಲಿ ತೊಡಗಿಕೊಂಡರೂ ಕೂಡ ಪತ್ರಕರ್ತರ ಮಾನ್ಯತೆ ರದ್ದುಪಡಿಸುವುದಕ್ಕೆ ಅವಕಾಶ ನೀಡಲಾಗಿದೆ.
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಸೋಮವಾರ ‘ದಿ ಸೆಂಟ್ರಲ್ ಮೀಡಿಯಾ ಅಕ್ರೆಡಿಟೇಶನ್ ಗೈಡ್‌ಲೈನ್ಸ್-2022’ ಪ್ರಕಟಿಸಿದೆ. ಅದರಲ್ಲಿ ಪತ್ರಕರ್ತರ ಮಾನ್ಯತೆ ರದ್ದುಪಡಿಸುವ ಅಥವಾ ಅಮಾನತಿನಲ್ಲಿಡುವ ಬಗ್ಗೆ ಮಾರ್ಗಸೂಚಿಗಳಿವೆ. ಜೊತೆಗೆ, ಇದೇ ಮೊದಲ ಬಾರಿ ಆನ್‌ಲೈನ್ ಸುದ್ದಿ ಮಾಧ್ಯಮಗಳಿಗೂ ಮಾನ್ಯತೆ ನೀಡಲು ಆರಂಭಿಸಲಾಗಿದೆ. ಆದರೆ, ಬೇರೆ ಬೇರೆ ಸುದ್ದಿ ಮಾಧ್ಯಮಗಳಿಂದ ಸುದ್ದಿ ಸಂಗ್ರಹಿಸಿ ಪ್ರಕಟಿಸುವ ನ್ಯೂಸ್ ಅಗ್ರಿಗೇಟರ್‌ಗಳನ್ನು ಮಾನ್ಯತೆಗೆ ಪರಿಗಣಿಸಿಲ್ಲ.