ನವದೆಹಲಿ: ಕೋವಿಡ್ ಲಸಿಕೆಗಾಗಿ ಕೋವಿನ್ ಪೋರ್ಟಲ್‍ನಲ್ಲಿ ನೋಂದಣಿಗಾಗಿ ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಸುಪ್ರಿಂ ಕೋರ್ಟ್ ಗೆ ತಿಳಿಸಿದೆ.
ಪುಣೆ ಮೂಲದ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಸಿದ್ಧಾರ್ಥ್ ಶಂಕರ್ ಶರ್ಮಾ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಕೊವಿಡ್-19 ಲಸಿಕೆಯನ್ನು ನೀಡುವ ಉದ್ದೇಶಕ್ಕಾಗಿ ಗುರುತಿನ ಏಕೈಕ ಪುರಾವೆಯಾಗಿ ಆಧಾರ್ ಕಾರ್ಡ್ ನೀಡಲು ಕೇಳಬಾರದು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಾಯೋಗಿಕ ಕ್ರಮಗಳಿಗೆ ವಿರುದ್ಧವಾಗಿ, ಇತ್ತೀಚೆಗೆ ಮತ್ತೊಂದು ಮಾರ್ಗಸೂಚಿಯನ್ನು ಹೊರಡಿಸಿದೆ. ಇದರಲ್ಲಿ ಲಸಿಕೆ ನೀಡದ ವ್ಯಕ್ತಿಗಳಿಗೂ ಲಸಿಕೆ ನೀಡುವಂತೆ ನಿರ್ದೇಶಿಸಲಾಗಿದೆ. ಕೋವಿಡ್ ಪೋರ್ಟಲ್‍ನಲ್ಲಿ ಉಲ್ಲೇಖಿಸಿದಂತೆ ಏಳು ಸೂಚಿಸಲಾದ ಫೋಟೋ ಐಡಿ ಕಾರ್ಡ್‍ಗಳಲ್ಲಿ ಯಾವುದಾದರೂ ಒಂದನ್ನು ನೀಡಿದರೆ ಸಾಕು. ಲಸಿಕೆಗಾಗಿ ಕೊವಿನ್ ಪೋರ್ಟಲ್‍ನಲ್ಲಿ ಆಧಾರ್ ವಿವರಗಳನ್ನು ಸಲ್ಲಿಸುವ ಕಡ್ಡಾಯ ಪೂರ್ವ-ಷರತ್ತನ್ನು ತೆಗೆದುಹಾಕುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಮನವಿ ಮಾಡಲಾಗಿತ್ತು.
ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ವಕೀಲ ಅಮನ್ ಶರ್ಮಾ, ಆಧಾರ್ ಮಾತ್ರ ಪೂರ್ವ ಷರತ್ತಲ್ಲ ಮತ್ತು ಯಾವುದೇ ಗುರುತಿನ ಚೀಟಿ ಇಲ್ಲದ 87 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.
ನ್ಯಾಯಪೀಠ ಹೇಳಿದ್ದೇನು?: ಆಧಾರ್ ವಿವರ ದಾಖಲಿಸುವುದು ವ್ಯಾಕ್ಸಿನೇಷನ್ ಪಡೆಯಲು ಕಡ್ಡಾಯವಲ್ಲ, ಪಾಸ್‍ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್, ಮತದಾರರ ಚೀಟಿ, ಪಡಿತರ ಚೀಟಿ ಸೇರಿಂದತೆ 9 ಗುರುತಿನ ದಾಖಲೆಗಳ ಪೈಕಿ ಯಾವುದಾದರೂ ಒಂದನ್ನು ಲಸಿಕೆ ಪಡೆಯಲು ಸಲ್ಲಿಸಬಹುದು.
ಎಲ್ಲ ಸಂಬಂಧಿತ ಅಧಿಕಾರಿಗಳು ಆರೋಗ್ಯ ಸಚಿವಾಲಯದ ನೀತಿಗೆ ಅನುಸಾರವಾಗಿ ಕಾರ್ಯನಿರ್ವಹಿಸಬೇಕು. ಜೈಲು ಕೈದಿಗಳು, ಮಾನಸಿಕ ಆರೋಗ್ಯ ಸಂಸ್ಥೆಗಳಲ್ಲಿನ ಕೈದಿಗಳು ಮುಂತಾದ ಗುರುತಿನ ಚೀಟಿಗಳನ್ನು ಹೊಂದಿರದ ಇತರ ವರ್ಗದ ವ್ಯಕ್ತಿಗಳಿಗೆ ಅವಕಾಶ ನೀಡಬೇಕು. ಕೋವಿನ್ ಫೋರ್ಟಲ್‍ನಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡುವಂತೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಕೋರ್ಟ್ ಸೂಚನೆ ನೀಡಿದೆ.