ಸಮಗ್ರ ನ್ಯೂಸ್ ಡೆಸ್ಕ್: ಒಂದೇ ಕುಟುಂಬದ ನಾಲ್ವರು ಮಕ್ಕಳು ಸೇರಿದಂತೆ ಐವರನ್ನು ಬರ್ಬರವಾಗಿ ಹತ್ಯೆಗೈದಿರುವ ಭೀಕರ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಕೆ.ಆರ್.ಎಸ್ನಲ್ಲಿ ನಡೆದಿದೆ.
ಕೆ.ಆರ್.ಎಸ್ ಗ್ರಾಮದ ಬಜಾರ್ ಲೈನ್ ನಿವಾಸಿ ಗಂಗರಾಮ್ ಪತ್ನಿ ಲಕ್ಷ್ಮೀ(30), ಮಕ್ಕಳಾದ ರಾಜ್ (12) ಕೋಮಲ್ (7), ಕುನಾಲ್(5) ಹಾಗೂ ಅಣ್ಣನ ಮಗ ಗೋವಿಂದ್(12) ಕೊಲೆಯಾದ ದುರ್ದೈವಿಗಳು.
ಗಂಗರಾಮ್ ಹಾಗೂ ಆತನ ಅಣ್ಣ ಗಣೇಶ್ ಪ್ಲಾಸ್ಟಿಕ್ ಅಲಂಕಾರಿಕ ವಸ್ತುಗಳ ವ್ಯಾಪಾರಿಗಳಾಗಿದ್ದು, ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಿಗೂ ಹೋಗಿ ವ್ಯಾಪಾರ ಮಾಡುತ್ತಾರಂತೆ. ಒಮ್ಮೆ ವ್ಯಾಪಾರಕ್ಕೆಂದು ಮನೆಯಿಂದ ಹೋದ್ರೆ ಹದಿನೈದರಿಂದ ಒಂದು ತಿಂಗಳು ವಾಪಸ್ ಬರುವುದಿಲ್ಲ.
ಇನ್ನು ಗಂಗರಾಜ್ ಎರಡು ದಿನದ ಹಿಂದೆ ವ್ಯಾಪಾರಕ್ಕೆಂದು ಮನೆಯಿಂದ ಹೋಗಿದ್ದರು. ಹೀಗಾಗಿ ಲಕ್ಷ್ಮೀ ಮಕ್ಕಳನ್ನು ನೋಡಿಕೊಂಡು ಮನೆಯಲ್ಲೇ ಇದ್ದು, ರಾತ್ರಿ ಎಲ್ಲರೂ ಮಲಗಿದ ಬಳಿಕ ಮನೆಗೆ ನುಗ್ಗಿರುವ ಹಂತಕರು ಹರಿತವಾದ ಮಾರಕಾಸ್ತ್ರಗಳಿಂದ ಐವರನ್ನು ಹತ್ಯೆ ಮಾಡಿದ್ದಾರೆ. ಬಳಿಕ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಹಣವನ್ನು ಕದ್ದು ಪರಾರಿಯಾಗಿದ್ದಾರೆ ಎನ್ನಲಾಗಿದೆ.