ಸಮಗ್ರ ನ್ಯೂಸ್ ಡೆಸ್ಕ್: ಒಂದು ಎಕರೆ ಹದಿನಾರು ಗುಂಟೆ ಜಮೀನಿಗಾಗಿ ಬದುಕಿರುವ ಅಜ್ಜಿಯನ್ನು ಸಂಬಂಧಿಕರೇ ದಾಖಲೆಗಳಲ್ಲಿ ಸಾಯಿಸಿದ್ದು, ಇದಕ್ಕೆ ಅಧಿಕಾರಿಗಳು ಕೈಜೋಡಿಸಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಕೊಪ್ಪ ಗ್ರಾಮದಲ್ಲಿ ನಡೆದಿದೆ.
76 ವರ್ಷದ ಸಾರಮ್ಮ ದೈಹಿಕವಾಗಿ ಜೀವಂತವಾಗಿದ್ದರೂ ಸಂಬಂಧಿಕರು ಹಾಗೂ ಅಧಿಕಾರಿಗಳ ಎಡವಟ್ಟಿನಿಂದ ದಾಖಲೆಗಳಲ್ಲಿ ಸತ್ತ ನತದೃಷ್ಟ ಅಜ್ಜಿ. ಸಾರಮ್ಮರಿಗೆ ಬಾಳೆಕೊಪ್ಪ ಗ್ರಾಮದ ಸರ್ವೇ ನಂಬರ್ 26ರಲ್ಲಿ ಒಂದು ಎಕರೆ 16 ಗುಂಟೆ ಜಮೀನಿದೆ. ಅದರಲ್ಲಿ ರಬ್ಬರ್ ಹಾಗೂ ಬಾಳೆಗಿಡಗಳನ್ನು ಬೆಳೆದಿದ್ದರು. ಕೊರೊನಾ ಪಾಸಿಟಿವ್ ಬಂದಿದ್ದರಿಂದ ಜಮೀನನ್ನು ಸಂಬಂಧಿಕರಿಗೆ ಉಳುಮೆ ಮಾಡಲು ಹೇಳಿ ಮಗಳ ಮನೆಗೆ ಹೋಗಿದ್ದರು. ಅಜ್ಜಿ ಅತ್ತ ಹೋಗುತ್ತಿದ್ದಂತೆ ಸಂಬಂಧಿಕರು ನಕಲಿ ದಾಖಲೆ ಸೃಷ್ಟಿಸಿ ಅಜ್ಜಿಯ ಜಮೀನನ್ನು ಕಬಳಿಸಲು ಯತ್ನಿಸಿದ್ದಾರೆ.
ಅಧಿಕಾರಿಗಳು ಕೂಡ ಮರಣ ಪ್ರಮಾಣ ಪತ್ರ ನೀಡಿದ್ದಾರೆ. ವಂಶವೃಕ್ಷ ಕೂಡ ಕೊಟ್ಟಿದ್ದಾರೆ. ಮಗಳ ಮನೆಯಿಂದ ಬಂದ ಸಾರಮ್ಮ ನ್ಯಾಯಬೆಲೆ ಅಂಗಡಿಗೆ ಪಡಿತರ ತರಲು ಹೋದಾಗ ನೀವು ಸತ್ತಿದ್ದೀರಾ, ನಿಮ್ಮ ರೇಷನ್ ಕಾರ್ಡ್ ಸ್ಥಗಿತಗೊಂಡಿದೆ ಎಂದು ಹೇಳಿದ್ದಾರೆ. ಸಾರಮ್ಮ ತಾಲೂಕು ಕಚೇರಿಗೆ ಬಂದು ವಿಚಾರಿಸಿದಾಗ ಪ್ರಕರಣ ಬಯಲಿಗೆ ಬಂದಿದೆ. ವೃದ್ಧೆ ಸಂಬಂಧಿ ಬಾಬು ಹಾಗೂ ಶ್ರೀಜಾ ನಕಲಿ ದಾಖಲೆ ಸೃಷ್ಟಿಸಿ ಪೌತಿ ಖಾತೆಗೂ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ. ನಕಲಿ ದಾಖಲೆ ಸೃಷ್ಟಿಸುವಾಗ ಪ್ರಕರಣ ಗ್ರಾಮ ಲೆಕ್ಕಾಧಿಕಾರಿ ಬಳಿಯೂ ಹೋಗಿತ್ತು. ಗ್ರಾಮ ಲೆಕ್ಕಾಧಿಕಾರಿ, ಅಜ್ಜಿ ಬದುಕಿರುವಾಗಲೇ ಯಾಕೆ ಈ ರೀತಿ ದಾಖಲೆ ತಂದಿದ್ದೀರಾ? ಎಂದು ಎಚ್ಚರಿಕೆ ನೀಡಿ, ಸಹಿ ಮಾಡದೆ ಕಳುಹಿಸಿದ್ದರು. ಸಾರಮ್ಮ ನಾನು ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದೇನೆ. ದಯಮಾಡಿ ಅಧಿಕಾರಿಗಳು ನನಗೆ ನ್ಯಾಯ ಕೊಡಿಸಬೇಕು, ತಪ್ಪಿಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಎನ್.ಆರ್.ಪುರ ತಹಶೀಲ್ದಾರ್ ಗೀತಾ, ಈ ಕೇಸ್ ನನ್ನ ಗಮನಕ್ಕೆ ಬಂದಿದೆ. ನೊಂದ ವೃದ್ಧೆಗೆ ನ್ಯಾಯ ಕೊಡಿಸುವ ಭರವಸೆ ನೀಡಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.