ಸಮಗ್ರ ನ್ಯೂಸ್ ಡೆಸ್ಕ್: ಕರ್ನಾಟಕದಲ್ಲಿ ತೀವ್ರ ಚರ್ಚೆಯಾಗುತ್ತಿರುವ ಹಿಜಾಬ್ ಬಗ್ಗೆ ಲೋಕಸಭೆಯಲ್ಲೂ ಪ್ರಸ್ತಾಪಿಸಲಾಗಿದೆ. ಇಂದು ನಡೆದ ಲೋಕಸಭೆ ಕಲಾಪದ ವೇಳೆ ತಮಿಳುನಾಡಿನ ಡಿಎಂಕೆ ಸಂಸದ ಸೆಂಥಿಲ್ ಕುಮಾರ್ ಹಿಜಾಬ್ ವಿಷಯ ಪ್ರಸ್ತಾಪಿಸಿದ್ದಾರೆ.
ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡುತ್ತಿಲ್ಲ, ತರಗತಿಗಳಿಗೆ ಪ್ರವೇಶ ಕೂಡ ನೀಡುತ್ತಿಲ್ಲ, ಇದು ಸರಿಯಾದ ಕ್ರಮವಲ್ಲ, ಹಿಜಾಬ್ ಬಗ್ಗೆ ಹೊಸ ನಿಯಮ ಮಾಡಬೇಕಾಗಿದೆ ಇದು ಸರಿಯಾದ ಕ್ರಮವಲ್ಲ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕದಲ್ಲಿ ಎದ್ದಿರುವ ಹಿಜಾಬ್ ವಿವಾದದಲ್ಲಿ ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಬೇಕು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಈ ನಡುವೆ ಇತ್ತ ಹಿಜಾಬ್ ವಿವಾದ ಕರಾವಳಿ ಜಿಲ್ಲೆಗಳಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಇಂದು ಕೂಡ ಉಡುಪಿಯಲ್ಲಿ ವಿದ್ಯಾರ್ಥಿನಿಯರು ಸರ್ಕಾರಿ ಕಾಲೇಜಿನ ಹೊರಭಾಗ ನಿಂತು ಪ್ರತಿಭಟನೆ ನಡೆಸಿದ್ದಾರೆ. ಕರಾವಳಿ ಹೊರತು ಪಡಿಸಿ ಇದೀಗ ಇತರ ಜಿಲ್ಲೆಗಳಿಗೂ ಹಿಜಾಬ್ ವಿವಾದ ವ್ಯಾಪಿಸಿದೆ. ಇಂದು ಮೈಸೂರಿನಲ್ಲಿ ಹಿಜಬ್ ಧರಿಸಲು ಅವಕಾಶ ಮಾಡಿಕೊಡುವಂತೆ ಪ್ರತಿಭಟನೆ ನಡೆದಿದೆ.
ಈ ಎಲ್ಲಾ ಘಟನೆಗಳ ನಡುವೆ ಹಿಜಬ್ ವಿವಾದದ ಪ್ರಕರಣವು ಹೈಕೋರ್ಟ್‌ನಲ್ಲಿದೆ. ತೀರ್ಪು ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟಪಡಿಸಿದ್ದಾರೆ. ಫೆ.8 ರಂದು ಹೈಕೋರ್ಟ್‌ನಿಂದ ತೀರ್ಪು ಹೊರಬೀಳುವ ಸಾಧ್ಯತೆ ಇದೆ.