ಸಮಗ್ರ ಸುದ್ದಿ ವಿಭಾಗ: ಕರ್ನಾಟಕದ ಕಾಲೇಜುಗಳಲ್ಲಿ ಹಿಜಾಬ್ ಕಾರಣ ಮುಂದಿಟ್ಟು ವಿದ್ಯಾರ್ಥಿನಿಯರ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
‘ಬೇಟಿ ಬಚಾವೋ ಬೇಟಿ ಪಡಾವೋ’ ಎಂಬುದು ಮತ್ತೊಂದು ಸುಳ್ಳು ಘೋಷಣೆ. ಮುಸಲ್ಮಾನ ಹೆಣ್ಣುಮಕ್ಕಳಿಗೆ ತಮ್ಮ ಉಡುಗೆ ತೊಡುಗೆಗಳಿಂದಾಗಿ ಶಿಕ್ಷಣದ ಹಕ್ಕನ್ನು ನಿರಾಕರಿಸುತ್ತಿದ್ದಾರೆ. ಮುಸ್ಲಿಮರನ್ನು ಕಡೆಗಣಿಸುವುದನ್ನು ಕಾನೂನುಬದ್ಧಗೊಳಿಸುವುದು ಗಾಂಧಿಯವರ ಭಾರತವನ್ನು ಗೋಡ್ಸೆಯ ಭಾರತವನ್ನಾಗಿ ಪರಿವರ್ತಿಸುವ ಇನ್ನೊಂದು ಹೆಜ್ಜೆಯಾಗಿದೆ ಎಂದು ಮುಫ್ತಿ ಟ್ವೀಟ್ ಮಾಡಿದ್ದಾರೆ.
ಬಿಜೆಪಿಯು ದೇಶದ ವಾತಾವರಣವನ್ನು ಹದಗೆಡಿಸುತ್ತಿದೆ ಎಂದು ಮುಫ್ತಿ ದೂರಿದ್ದಾರೆ. ಬಿಜೆಪಿಯ ದೇಶದಲ್ಲಿ ಒಂದು ಭಾಷೆ, ಒಂದು ಧರ್ಮ, ಒಂದು ಸಂಸ್ಕೃತಿಯನ್ನು ಹೇರುತ್ತಿದೆ. ಇದರಿಂದ ದೇಶದ ಬಹುತ್ವಕ್ಕೆ ಉಳಿಗಾಲವಿಲ್ಲ ಎಂದು ಅವರು ಹೇಳಿದ್ದಾರೆ.
ಒಟ್ಟಾರೆ ಕರ್ನಾಟಕದಲ್ಲಿನ ಹಿಜಾಬ್ ಕುರಿತ ಪ್ರಕರಣಗಳು ದೇಶವ್ಯಾಪಿ ಸುದ್ದಿಯಾಗುತ್ತಿದ್ದು, ಇದಕ್ಕೆ ಸರ್ಕಾರ ತಾರ್ಕಿಕ ಅಂತ್ಯ ಕಾಣಿಸಬೇಕಿದೆ. ಶೈಕ್ಷಣಿಕ ಸಂಸ್ಥೆಗಳು ಧರ್ಮ ರಾಜಕಾರಣಕ್ಕೆ ಬೇಯುತ್ತಿರುವುದು ಉತ್ತಮ ಲಕ್ಷಣವಲ್ಲ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.