ಸಮಗ್ರ ನ್ಯೂಸ್ ಡೆಸ್ಕ್: ಕೇರಳದ ಕಾಸರಗೋಡಿನಿಂದ ಮಂಗಳೂರಿನ ಉಳ್ಳಾಲಕ್ಕೆ ಒಂದು ಕ್ವಿಂಟಾಲ್ 60ಕೆಜಿ ಗೋ ಮಾಂಸವನ್ನು ಕಾರಿನಲ್ಲಿ ತುಂಬಿಸಿ ಸಾಗಾಟ ಮಾಡುತ್ತಿದ್ದ ಪ್ರಕರಣ ಪತ್ತೆ ಹಚ್ವಿದ ಪೊಲೀಸರು ಈ ಸಂಬಂಧ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಮಂಗಳೂರು ಪೆರ್ಮನ್ನೂರು ಚೆಂಬುಗುಡ್ಡೆ ನಿವಾಸಿ ಹುಸೇನ್ (24), ಉಳ್ಳಾಲ ರಿಜ್ವಾ ಮಂಜಿಲ್ ಕೋಡಿಯ ಮಹಮ್ಮದ್ ಮುಜಾಂಬಿಲ್ (25), ಉಳ್ಳಾಲದ ಫಾತಿಮಾ ಮಂಜಿಲ್ ಕೋಡಿಯ ಮಹಮ್ಮದ್ ಅಮೀನ್ (21) ಮತ್ತು ಉಳ್ಳಾಲ ಅಲ್ ಅದಿ ಹೌಸ್ ಕೋಡಿಯ ಸೊಹೈಬ್ ಅಕ್ತರ್ (22) ಬಂಧಿತರು. ಆರೋಪಿಗಳಿಂದ ಗೋ ಮಾಂಸ, ಕಾರು ಸೇರಿದಂತೆ ರೂ.3.10 ಲಕ್ಷ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪೊಲೀಸರಿಗೆ ದೊರೆತ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆದಿತ್ತು. ಕಾಸರಗೋಡು ತಾಲೂಕು ಬಂದ್ಯೋಡು ಎಂಬಲ್ಲಿನ ಮೊಹಮ್ಮದ್ ಎಂಬವರಿಂದ ದನವನ್ನು ಖರೀದಿಸಿ ಅವರ ಮನೆಯಲ್ಲೇ ದನವನ್ನು ಕಡಿದು ಮಾಂಸ ಮಾಡಿ ಉಳ್ಳಾಲಕ್ಕೆ ತಂದು ಯುಸಿ ಇಬ್ರಾಹಿಂ ಕೋಡಿ ಎಂಬವರ ಕೋಡಿ ಮತ್ತು ಮುಕ್ಕಚ್ಚೇರಿಯಲ್ಲಿರುವ ಬೀಫ್ ಸ್ಟಾಲ್ ನಲ್ಲಿ ಮಾರಾಟ ಮಾಡಲು ಆರೋಪಿಗಳು ಮಾಂಸ ಸಾಗಾಟ ಮಾಡುತ್ತಿದ್ದರು. ಕಾರಿನಲ್ಲಿ ದನದ ಮಾಂಸ, ದನದ ಮೂರು ತಲೆಗಳು ದನದ ಚರ್ಮಗಳು ಪತ್ತೆ ಯಾಗಿವೆ. ಉಳ್ಳಾಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.