ಮಂಗಳೂರು: ಅದೆಷ್ಟೋ ವರ್ಷಗಳ ಕಾಲ ಬಾಳಿ ಬದುಕಿ ಮನೆ ಮಂದಿಯನ್ನು ನೋಡಬೇಕಿದ್ದ ಯುವಕ ಸಣ್ಣ ವಯಸ್ಸಿನಲ್ಲೇ ಇಹಲೋಕದ ಪಯಣ ಮುಗಿಸಿದ್ದಾನೆ. ಆದರೆ ತೆರಳುವ ಮುನ್ನ ಇತರರ ಬಾಳಿಗೆ ಬೆಳಕಾಗಿದ್ದಾನೆ.
ಬೆಳ್ತಂಗಡಿ ತಾಲೂಕಿನ ಕೊಕ್ರಾಡಿ ಗ್ರಾಮದ ಆದರ್ಶ ನಗರ ನಿವಾಸಿ ಶಶಾಂಕ್ ಮಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿ ಆಗಿದ್ದ. 10ನೇ ತರಗತಿ ಕಲಿತ ಬಳಿಕ ಶಿಕ್ಷಣ ಮೊಟಕುಗೊಳಿಸಿ ಮನೆಯ ಆರ್ಥಿಕ ಸಮಸ್ಯೆಗಾಗಿ ಮಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡ್ತಾ ಇದ್ದ. ಶಶಾಂಕ್‌ಗೆ ಎರಡು ಜನ ಅಕ್ಕಂದಿರು. ದುಡಿದು ಮನೆ ನಿರ್ವಹಿಸುತ್ತಿದ್ದ 19ರ ಹರೆಯದ ಯುವಕ ಇದೀಗ ಇಹಲೋಕದ ಪ್ರಯಾಣಕ್ಕೆ ಪೂರ್ಣ ವಿರಾಮವನ್ನಿಟ್ಟಿದ್ದಾನೆ. ಈತನ ಸಾವು ಮನೆ ಮಂದಿಯನ್ನು ದಿಗ್ಭಮೆಗೊಳಿಸಿದೆ.
ದುಡಿದು ಮನೆ ನಿರ್ವಹಿಸ್ತಾ ಇದ್ದ ಶಶಾಂಕ್ ಗೆ ಕಳೆದ ಒಂದು ವರ್ಷದಿಂದ ಕಾಲು ಊತದ ಸಮಸ್ಯೆ ಇತ್ತು. ಕಿಡ್ನಿ ಸಮಸ್ಯೆ ಅಂತ ತೋರಿಸಿದ್ದರು. ಎಲ್ಲಾ ಸ್ಕ್ಯಾನ್ ಮಾಡಿದ್ದು, ಮದ್ದು ಮಾಡಿದರೂ ಸಮಸ್ಯೆ ಪರಿಹಾರ ಆಗಿರಲಿಲ್ಲ. ಕಳೆದ ಒಂದಷ್ಟು ದಿನದಿಂದ ಶಶಾಂಕ್ ಜ್ವರದಿಂದ ಮನೆಯಲ್ಲಿ ಮಲಗಿದ್ದ. ನಿನ್ನೆ ಸಂಜೆ ಹೊತ್ತು ವಿಪರೀತ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಾರಾವಿಗೆ ಕರೆ ತರಲಾಗಿದ್ದು, ಇಸಿಜಿ ಮಾಡಿದಾಗ ಹೃದಯ ಬಡಿತ ಹೆಚ್ಚಿತ್ತು. ಬಳಿಕ ಮಂಗಳೂರಿಗೆ ಕರೆತಂದು ಸಿಟಿ ಸ್ಕ್ಯಾನ್ ಮಾಡಿದಾಗ ಹಾರ್ಟ್‌ನಲ್ಲಿ ಹೋಲ್ ಕಾಣಿಸಿಕೊಂಡಿತ್ತು. ನಿನ್ನೆ ತಪಾಸಣೆ ನಡೆಸಿದ ವೈದ್ಯರು ಚಿಕಿತ್ಸೆ ನೀಡಿದ್ದರು. ಆದರೆ ಇಂದು ಬೆಳಗ್ಗೆ ಶಶಾಂಕ್ ಮೃತಪಟ್ಟಿದ್ದಾರೆ. ಆದರೆ ಶಶಾಂಕ್ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಬಡತನದಿಂದ ಬಳಲುತ್ತಿರುವ ಕುಟುಂಬದ ಶಶಾಂಕ್‌ನ ಕಣ್ಣನ್ನು ದಾನ ಮಾಡುವ ಮೂಲಕ ಇತರರ ಬಾಳಿಗೆ ಬೆಳಕಾಗಿದ್ದಾನೆ ಯುವಕ ಶಶಾಂಕ್.
ವಿಧಿಯಾಟ ಬಲು ಕ್ರೂರ ಎನ್ನುವುದು ಇದಕ್ಕೆ. ಯಾಕೆಂದರೆ ಶಶಾಂಕ್ ಮನೆಯಲ್ಲಿ ನಾಲ್ಕು ವರ್ಷದ ಅವಧಿಯಲ್ಲಿ ನಾಲ್ಕು ಜೀವ ಬಲಿಯಾಗಿದೆ. ಶಶಾಂಕ್ ಅಜ್ಜಿ, ಶಶಾಂಕ್ ಅಜ್ಜ, ಮಾವ, ಇದೀಗ ಶಶಾಂಕ್, ಕೇವಲ ನಾಲ್ಕು ವರ್ಷದ ಅವಧಿಯಲ್ಲಿ ನಾಲ್ಕು ಜೀವಗಳು ಬಲಿಯಾಗಿದೆ. ಈಗಾಗಲೇ ಚಿಕಿತ್ಸೆಗಾಗಿ ಲಕ್ಷಾಂತರ ಸಾಲ ಮಾಡಿ ಸೋತು ಹೋಗಿರುವ ಕುಟುಂಬಕ್ಕೆ ಶಶಾಂಕ್ ಸಾವು ಬರಸಿಡಿಲಿನಂತಾಗಿದೆ. ಹೀಗಾಗಿ ಸರ್ಕಾರದ ಒಂದಷ್ಟು ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿ ಕುಟುಂಬವಿದೆ.