ಬೆಂಗಳೂರು: ಕೊರೊನಾ ನಡುವೆಯೂ ದಕ್ಷಿಣ ಭಾರತದ ಬೆಂಗಳೂರು, ಮಂಗಳೂರು ಮತ್ತು ಮೈಸೂರು ಸಹಿತ 10 ನಗರಗಳಲ್ಲಿ ವಾಯುಮಾಲಿನ್ಯ ಹೆಚ್ಚಾಗಿರುವ ಕುರಿತ ಆತಂಕಕಾರಿ ವರದಿಯೊಂದು ಹೊರಬಿದ್ದಿದೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ನಿಗದಿಪಡಿಸಿರುವ ಗುಣಮಟ್ಟಕ್ಕಿಂತಲೂ ಈ ನಗರಗಳಲ್ಲಿ ಹೆಚ್ಚಿನ ಮಾಲಿನ್ಯವಿದೆ ಎಂದು ಗ್ರೀನ್‌ಪೀಸ್ ಇಂಡಿಯಾ ಹೇಳಿದೆ.
ಕೊಯಮತ್ತೂರು, ಬೆಂಗಳೂರು, ಮಂಗಳೂರು ಮತ್ತು ಅಮರಾವತಿಯ ಪಿಎಂ 2.5 ಮಟ್ಟ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯಲ್ಲಿ ತಿಳಿಸಿರುವ ಮಟ್ಟಕ್ಕಿಂತ 6ರಿಂದ 7 ಪಟ್ಟು ಹೆಚ್ಚಾಗಿದೆ. ಮೈಸೂರು, ಕೊಚ್ಚಿ, ಚೆನ್ನೈ ಮತ್ತು ಪುದುಚೇರಿಯ ಪಿಎಂ 2.5 ಮಟ್ಟ 4ರಿಂದ 5 ಪಟ್ಟು ಹೆಚ್ಚಿದೆ ಎಂದು ಗ್ರೀನ್‌ಪೀಸ್ ವರದಿ ಹೇಳಿದೆ. ಈ ಮೂಲಕ ವಾಯುಮಾಲಿನ್ಯ ಮಟ್ಟ ಕೇವಲ ಉತ್ತರ ಭಾರತವಷ್ಟೇ ಅಲ್ಲ, ದಕ್ಷಿಣ ಭಾರತದಲ್ಲೂ ಹೆಚ್ಚಾಗಿದೆ ಎಂಬುದನ್ನು ಮನದಟ್ಟು ಮಾಡಿದೆ ಎಂದು “ಇಂಡಿಯನ್ ಎಕ್ಸ್‌ಪ್ರಸ್’ ಉಲ್ಲೇಖೀಸಿದೆ.
ವಿಚಿತ್ರವೆಂದರೆ, ಲಾಕ್‌ಡೌನ್ ಘೋಷಣೆ ಮಾಡಿದ್ದ ಅವಧಿಯಲ್ಲೂ 10 ನಗರಗಳಲ್ಲಿ ಪಿಎಂ 2.5 ಮತ್ತು ಪಿಎಂ 10 ವಾರ್ಷಿಕ ಮೌಲ್ಯ ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿರುವ ಮಾರ್ಗಸೂಚಿಗಿಂತ ಹೆಚ್ಚಾಗಿದೆ ಎಂದು ಈ ವರದಿ ತಿಳಿಸಿದೆ. ವಿಶಾಖಪಟ್ಟಣ, ಹೈದರಾಬಾದ್‌ಗಳಲ್ಲಿ ಮಾಲಿನ್ಯ ಆರು ಪಟ್ಟು ಹೆಚ್ಚಿದ್ದರೆ ಬೆಂಗಳೂರು, ಮಂಗಳೂರು, ಅಮರಾವತಿ, ಚೆನ್ನೈ, ಕೊಚ್ಚಿಯಲ್ಲಿ 3ರಿಂದ 4 ಪಟ್ಟು ಹೆಚ್ಚಿತ್ತು ಎಂದು ಗ್ರೀನ್‌ಪೀಸ್ ವರದಿ ಹೇಳಿದೆ. ಮೈಸೂರು, ಕೊಯಮತ್ತೂರು, ಪುದುಚೇರಿಯ ಮಾಲಿನ್ಯ ಪ್ರಮಾಣ ಎರಡರಿಂದ ಮೂರು ಪಟ್ಟು ಹೆಚ್ಚಾಗಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಉತ್ತರ ಭಾರತದಲ್ಲಿನ ಮಾಲಿನ್ಯತೆ ದಕ್ಷಿಣ ಭಾರತಕ್ಕೂ ದಾಂಗುಡಿ ಇಡುತ್ತಿರುವುದು ಮುಂದೆ ಈ ಭಾಗಗಳಲ್ಲಿ ರೋಗ ರುಜಿನಗಳು ಹೆಚ್ಚಾಗಲು ಕಾರಣವಾಗಬಹುದು.