ಬೆಂಗಳೂರು: ನಗರದಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಪಂದ್ಯಾಟಕ್ಕೆ ಕೊರೊನಾ ಅಡ್ಡಿಯಾಗಿದ್ದು 2 ತಂಡದ ಆಟಗಾರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಮಶಾಲ್ ಸ್ಪೋರ್ಟ್ಸ್ ಆಯೋಜಕತ್ವದಲ್ಲಿ ವಿವೋ ಪ್ರೊ ಕಬಡ್ಡಿ 8ನೇ ಆವೃತ್ತಿ ಬೆಂಗಳೂರಿನ ವೈಟ್‍ಫೀಲ್ಡ್‌ನಲ್ಲಿರುವ ಶೆರಟಾನ್ ಗ್ರ್ಯಾಂಡ್ ಹೋಟೆಲ್ ಹಾಗೂ ಕನ್ವೆನ್ಷನ್ ಸೆಂಟರ್‌ನಲ್ಲಿ ಕಠಿಣ ಬಯೋ ಬಬಲ್ ಮೂಲಕ ಟೂರ್ನಿ ನಡೆಯುತ್ತಿದೆ. ಆದರೆ ಇದೀಗ ಪಾಟ್ನಾ ಪೈರೇಟ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡದ ಕೆಲ ಆಟಗಾರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಹಾಗಾಗಿ 2 ತಂಡಗಳ ಕೆಲ ಪಂದ್ಯಗಳನ್ನು ಮುಂದೂಡಲಾಗಿದೆ. ಅಲ್ಲದೆ ಟೂರ್ನಿಯ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಿದೆ.
ಈ ಹಿಂದೆ ದಿನದಲ್ಲಿ ಒಟ್ಟು 2 ಪಂದ್ಯಗಳು ನಡೆಯುತ್ತಿತ್ತು. ಶನಿವಾರ ಮತ್ತು ಭಾನುವಾರ 3 ಪಂದ್ಯಗಳು ನಡೆಯುತ್ತಿತ್ತು. ಇಂದಿನಿಂದ ಮುಂದಿನ ಶುಕ್ರವಾರದ ವರೆಗೆ ಪ್ರತಿದಿನ ಕೇವಲ 1 ಪಂದ್ಯ ನಡೆಯಲಿದೆ. ಜೊತೆಗೆ ಶನಿವಾರ ಮತ್ತು ಭಾನುವಾರ 3 ಪಂದ್ಯಗಳ ಬದಲಾಗಿ 2 ಪಂದ್ಯಗಳು ನಡೆಯಲಿದೆ ಎಂದು ವರದಿಯಾಗಿದೆ.
ಈವರೆಗೆ ಒಟ್ಟು 152 ಪಂದ್ಯಗಳು ನಡೆದಿದ್ದು, ಪಾಯಿಂಟ್ ಪಟ್ಟಿಯಲ್ಲಿ ಬೆಂಗಳೂರು ಬುಲ್ಸ್ 14 ಪಂದ್ಯಗಳಿಂದ 8 ಜಯ, 5 ಸೋಲು, 1 ಟೈ ಸೇರಿ ಒಟ್ಟು 46 ಅಂಕ ಪಡೆದು ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ದಬಾಂಗ್ ಡೆಲ್ಲಿ, ಮೂರನೇ ಸ್ಥಾನದಲ್ಲಿ ಬೆಂಗಾಲ್ ವಾರಿಯರ್ಸ್ ಇದೆ.