ಕುಕ್ಕೆಸುಬ್ರಹ್ಮಣ್ಯ: ಧಾರ್ಮಿಕ ಕೇಂದ್ರಗಳಲ್ಲಿ ಪೂಜೆ, ಸೇವೆಗಳಿಗೆ ಬೇಡಿಕೆ ಇರುತ್ತದೆ. ಈ ನಿಟ್ಟಿನಲ್ಲಿ ಮುಂದಿನ ವಾರ ದೇವಸ್ಥಾನಗಳ ಆಡಳಿತ ಮಂಡಳಿ, ಅಧಿಕಾರಿಗಳು, ಜನಪ್ರತಿನಿಧಿಗಳ ಜತೆ ಸಭೆ ನಡೆಸಿ ಚರ್ಚಿಸುತ್ತೇವೆ. ಸರಕಾರ ಒಪ್ಪಿಗೆ ಸೂಚಿಸಿದಲ್ಲಿ ಮುಂದಿನ ವಾರದಿಂದ ಸೇವೆಗಳನ್ನು ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ| ಕುಮಾರ್ ಜತೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಸರ್ಪಸಂಸ್ಕಾರ ನಡೆಸುವ ವೈದಿಕ ಸಿಬಂದಿಯ ವರದಿ ಪಡೆದುಕೊಂಡು ವಸ್ತುಸ್ಥಿತಿಯ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.
ಸರಕಾರ ವಾರಾಂತ್ಯ ಕರ್ಫ್ಯೂ ತೆಗೆದು ಹಾಕಿದೆ. ಮುಂದಕ್ಕೆ ಜಿಲ್ಲಾ ಡಳಿತದಿಂದ ಏನು ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಆರೋಗ್ಯ ಸಹಿತ ಇತರ ತಜ್ಞರು, ಅಧಿಕಾರಿಗಳು, ಜನಪ್ರತಿನಿಧಿಗಳ ಜತೆ ಚರ್ಚಿಸಿ ಕೊರೊನಾ ನಿಯಂತ್ರಣಕ್ಕೆ ಜಿಲ್ಲೆ ಯಲ್ಲಿ ಯಾವ ಮಾರ್ಗಸೂಚಿ ಜಾರಿಗೊಳಿಸಬಹುದು ಎಂದು ತೀರ್ಮಾನ ಕೈಗೊಳ್ಳಲಾಗುವುದು ಎಂದರು.