ಸುಬ್ರಹ್ಮಣ್ಯ : ಬಿಸಿಲೆ ಘಾಟ್ ನ ರಸ್ತೆಯ ಬದಿ ಇರುವ ನದಿಯ ಸಮೀಪ ಅಪರಿಚಿತ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿಷಸೇವಿಸಿ ಅರೆಪ್ರಜ್ಞಾವಸ್ಥೆಯಲ್ಲಿದ್ದ ಈತನನ್ನು ಬದುಕಿಸಲು ಯುವ ತೇಜಸ್ಸು ಸಂಸ್ಥೆಯ ಸದಸ್ಯರ ಗರಿಷ್ಠ ಪ್ರಯತ್ನದ ಹೊರತಾಗಿಯೂ ವ್ಯಕ್ತಿ ಸಾವನ್ನಪ್ಪಿದ್ದಾನೆ.
ಬಿಸಿಲೆ ಘಾಟ್ ನ ಚೌಡೇಶ್ವರಿ ಅಮ್ಮನವರ ಗುಡಿಯಿಂದ ಸುಮಾರು 100 ಮೀಟರ್ ಇಳಿಜಾರಿನ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಅರೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳೀಯರ ಗಮನಕ್ಕೆ ಬಂದು ಕೂಡಲೇ ಸುಬ್ರಮಣ್ಯದ ಯುವತೇಜಸ್ಸು ಟ್ರಸ್ಟ್ ಗೆ ತಿಳಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಯುವ ತೇಜಸ್ಸು ತಂಡದ ಸದಸ್ಯರು ಆಂಬ್ಯುಲೆನ್ಸ್ ಸಮೇತ ಸ್ಥಳಕ್ಕೆ ತೆರಳಿದ್ದು ಸುಮಾರು 60-70 ಆಸುಪಾಸಿನ ವ್ಯಕ್ತಿಯೊಬ್ಬರು ಸಂಪೂರ್ಣ ನಗ್ನವಾಗಿ ಅರೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು.
ಕೂಡಲೇ ಆ ವ್ಯಕ್ತಿಯನ್ನು ಸುಬ್ರಮಣ್ಯ ಸರಕಾರಿ ಆಸ್ಪತೆಗೆ ಕರೆತಂದು, ಬಳಿಕ ಅವರನ್ನು ಸುಳ್ಯದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಈ ವೇಳೆ ದಾರಿ ಮಧ್ಯೆಯೇ ಆ ವ್ಯಕ್ತಿ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ.