ಬೆಂಗಳೂರು: ಜನವರಿ 25ರ ನಂತರ ರಾಜ್ಯದಲ್ಲಿ ಕೊರೋನಾ ತೀವ್ರ ಮಟ್ಟಕ್ಕೆ ತಲುಪಲಿದೆ ಎಂದು ತಜ್ಞರು ತಿಳಿಸಿದ್ದಾರೆ. ವೀಕೆಂಡ್ ಕರ್ಪ್ಯೂ ಅಂತ್ಯ, ಮುಂದುವರಿಕೆ ಬಗ್ಗೆ ಶುಕ್ರವಾರ ಮತ್ತೆ ಸಭೆ ಕರೆಯಲಾಗಿದ್ದು ಆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಅಲ್ಲಿಯವರೆಗೆ ರಾಜ್ಯದಲ್ಲಿ ವೀಕೆಂಡ್ ಹಾಗೂ ನೈಟ್ ಕರ್ಪ್ಯೂ ಮುಂದುವರೆಯಲಿದೆ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮಾಡುವ ಪ್ರಶ್ನೆಯೇ ಇಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ್ ಸ್ಪಷ್ಟ ಪಡಿಸಿದ್ದಾರೆ.
ಸಿಎಂ ನೇತೃತ್ವದ ಸಭೆಯ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಇಂದಿನ ಸಭೆಯಲ್ಲಿ ತಜ್ಞರು ಸೇರಿದಂತೆ ಅನೇಕ ಅಧಿಕಾರಿಗಳು ಎಲ್ಲಾ ಭಾಗವಹಿಸಿದ್ದರು. ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಕೋವಿಡ್ ಪರೀಕ್ಷೆಯನ್ನು ಕೂಡ ಹೆಚ್ಚಿನದಾಗಿ ಮಾಡಲಾಗುತ್ತಿದೆ. ಅಷ್ಟು ಪರೀಕ್ಷೆ ಮಾಡುವ ಅವಶ್ಯಕತೆ ಇಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಲಸಿಕಾಕರಣವು ಐದಾರು ಜಿಲ್ಲೆಗಳಲ್ಲಿ ಕಡಿಮೆ ಆಗಿದೆ. ಆ ಜಿಲ್ಲೆಗಳ ಡಿಸಿಗಳ ಜೊತೆಗೆ ಲಸಿಕಾಕರಣ ಹೆಚ್ಚು ಮಾಡೋದಕ್ಕೆ ಸೂಚಿಸಲಾಗಿದೆ ಎಂದರು.
ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಾಗದಂತೆ ಕ್ರಮ ಕೈಗೊಳ್ಳಲು ಸೂಚಿಸಿಲಾಗಿದೆ. ತಜ್ಞರ ಅಭಿಪ್ರಾಯ ಒಂದು ತಿಂಗಳೊಳಗೆ ಪೀಕ್ ಗೆ ಕೊರೋನಾ ತಲುಪಲಿದೆ ಎಂದು ತಿಳಿಸುತ್ತಿದ್ದಾರೆ. ಅದರಿಂದ ಜನವರಿ 25ರಿಂದ ಸೋಂಕು ಹೆಚ್ಚಾಗಲಿದೆ ಎನ್ನುವ ಕಾರಣ, ಲಾಕ್ ಡೌನ್ ಬಗ್ಗೆ, ವೀಕೆಂಡ್ ಕರ್ಪ್ಯೂ, ನೈಟ್ ಕರ್ಪ್ಯೂ ಬಗ್ಗೆಯೂ ಚರ್ಚಿಸಲಾಗಿದೆ ಎಂದರು.
ಎಲ್ಲಾ ತಜ್ಞರ ಅಭಿಪ್ರಾಯದ ನಂತ್ರ ಶುಕ್ರವಾರ ಸಭೆಯನ್ನು ಸೇರಿ ವೀಕೆಂಡ್, ನೈಟ್ ಕರ್ಪ್ಯೂ ವಿಸ್ತರಣೆ, ಅಂತ್ಯದ ಬಗ್ಗೆ ನಿರ್ಧಾರ ಕೈಗೊಳ್ಳವ ಬಗ್ಗೆ ಸಿಎಂ ಸೂಚಿಸಿದ್ದಾರೆ. ಅಲ್ಲಿಯವರೆಗೆ ಈಗಿರುವಂತ ನೈಟ್ ಕರ್ಪ್ಯೂ, ವೀಕೆಂಡ್ ಕರ್ಪ್ಯೂ ನಿಯಂತ್ರಣ ಕ್ರಮಗಳು ಮುಂದುವರೆಯಲಿವೆ. ಆ ಬಗ್ಗೆ ಶುಕ್ರವಾರದ ಸಿಎಂ ನೇತೃತ್ವದಲ್ಲಿ ಮತ್ತೊಂದು ಸಭೆ ನಡೆಸಿ, ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಇವತ್ತು ಲಾಕ್ ಡೌನ್ ಬಗ್ಗೆ ಕೂಡ ಚರ್ಚಿಸಲಾಗಿದ್ದು, ಆರೋಗ್ಯ ಸಚಿವರು, ಉನ್ನತ ಶಿಕ್ಷಣ ಸಚಿವರು ಸೇರಿದಂತೆ ಸಿಎಂ ಕೂಡ ಲಾಕ್ ಡೌನ್ ಮಾಡೋದು ಬೇಡವೆಂದು ಅಭಿಪ್ರಾಯ ಪಟ್ಟಿದ್ದಾರೆ. ಈಗಾಗಲೇ ವೀಕೆಂಡ್ ಕರ್ಪ್ಯೂ, ನೈಟ್ ಕರ್ಪ್ಯೂ ಜಾರಿಯಲ್ಲಿದೆ. ಇದರ ನಡುವೆ ಲಾಕ್ ಡೌನ್ ಪ್ರಶ್ನೆಯೇ ಇಲ್ಲ. ರಾಜ್ಯದಲ್ಲಿ ಲಾಕ್ ಡೌನ್ ಮಾಡುವ ಪ್ರಮೇಯವೇ ಇಲ್ಲ ಎಂದು ಸಿಎಂ ಕೂಡ ತಿಳಿಸಿದ್ದಾರೆ. ತಜ್ಞರ ಅಭಿಪ್ರಾಯ ಕೂಡ ಇದೇ ಆಗಿದೆ. ಶುಕ್ರವಾರ ವೀಕೆಂಡ್ ಕರ್ಪ್ಯೂ ಬಗ್ಗೆ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಆಧರಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.