ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಸನ್ನಿಧಾನದಲ್ಲಿ ಬೆಳ್ತಂಗಡಿ ತಾಲೂಕಿನ ಸಮಸ್ತ ಜನತೆಯ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ದೀರ್ಘಾಯಸ್ಸು ಹಾಗೂ ಆರೋಗ್ಯ ವೃದ್ಧಿಗಾಗಿ ಪ್ರಾರ್ಥಿಸಿ ಇಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಮಹಾ ಮೃತ್ಯುಂಜಯ ಹೋಮ ನಡೆಯುತ್ತಿದೆ.
ವೇದಮೂರ್ತಿ ನಾಗೇಂದ್ರ ಭಾರದ್ವಾಜ್ ಸುರತ್ಕಲ್ ಅವರ ಪ್ರಧಾನ ಪೌರೋಹಿತ್ಯದಲ್ಲಿ 108 ಮಂದಿ ಪುರೋಹಿತರಿಂದ ಧರ್ಮಸ್ಥಳ ದೇಗುಲದ ಆವರಣದಲ್ಲಿ ಏಳು ಹೋಮಕುಂಡಗಳಲ್ಲಿ ಹೋಮ ನಡೆಯುತ್ತಿದೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಸಮ್ಮುಖದಲ್ಲಿ ಬೆಳಗ್ಗೆ 7 ಗಂಟೆಯಿಂದ ಚತುರ್ವೇದ ಪಾರಾಯಣ ಪ್ರಾರಂಭಿಸಿ, ಗೋಪೂಜೆ, ಮಹಾಗಣಪತಿ ಹೋಮ ಬಳಿಕ ಮಹಾಮೃತ್ಯುಂಜಯ ಹೋಮ ನಡೆಯಲಿದೆ. ಈಗಾಗಲೇ ಶಾಸಕ ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ಬೆಳ್ತಂಗಡಿಯ 25 ಕ್ಷೇತ್ರಗಳಲ್ಲಿ ಮೃತ್ಯುಂಜಯ ಯಾಗ ನಡೆದಿದ್ದು, ಈ ಎಲ್ಲಾ ಯಾಗಗಳ ಪೂರ್ಣಾಹುತಿ ನೆಲೆಯಲ್ಲಿ ಧರ್ಮಸ್ಥಳದಲ್ಲಿ ಯಾಗ ನಡೆಯಲಿದೆ. ಸಚಿವರಾದ ಕೆ. ಎಸ್. ಈಶ್ವರಪ್ಪ, ಸಿ. ಸಿ. ಪಾಟೀಲ್, ಶಶಿಕಲಾ ಜೊಲ್ಲೆ, ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ, ಅವಿಭಜಿತ ಜಿಲ್ಲೆಯ ಎಲ್ಲ ಶಾಸಕರು, ವಿವಿಧ ಜಿಲ್ಲೆಗಳ ಬಿಜೆಪಿ ಅಧ್ಯಕ್ಷರು ಪ್ರಮುಖರು ಭಾಗವಹಿಸಲಿದ್ದಾರೆ.