ರೂ. 2 ಕೋಟಿ ಅನುದಾನ ಬಿಡುಗಡೆ | ಇಲ್ಲಿದೆ ಬರಪೂರ ಜಲಮೂಲ
ಸುಬ್ರಹ್ಮಣ್ಯ: ಕಡಬ ತಾಲೂಕಿನ ಸಂಸದರ ಆದರ್ಶ ಗ್ರಾಮದ ಬಳ್ಪದ ಐತಿಹಾಸಿಕ ಬೋಗಾಯನ ಕೆರೆ ಅಭಿವೃದ್ಧಿಗೆ ಕೊನೆಗೂ ಅಭಿವೃದ್ಧಿ ಭಾಗ್ಯ ಒದಗಿ ಬಂದಿದೆ. 1.40 ಎಕ್ರೆಯ ಕೆರೆ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆಯಿಂದ ರೂ. 2 ಕೋಟಿ ಅನುದಾನ ಬಿಡುಗಡೆಗೊಂಡಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ.
ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿಯ ಬಳ್ಪ ಗ್ರಾಮದ ಬಳ್ಪ ಪೇಟೆಯ ಸಮೀಪ ಇರುವ ಈ ಬೋಗಾಯನ ಕೆರೆ ಹಲವಾರು ವರ್ಷಗಳಿಂದ ಹೂಳು ತುಂಬಿಕೊಂಡು ಬರಡಾದ ಸ್ಥಿತಿಯಲ್ಲಿದೆ. ಈ ಕೆರೆಯನ್ನು ಪೂರ್ಣ ರೀತಿಯಲ್ಲಿ ಅಭಿವೃದ್ಧಿ ಪಡಿಸುವಂತೆ ಗ್ರಾಮಸ್ಥರು ಆಗ್ರಹಿಸುತ್ತಾ ಬಂದಿದ್ದರು. ಬಳ್ಪ ಗ್ರಾಮ ಸಂಸದರ ಆದರ್ಶ ಗ್ರಾಮವಾಗಿ ಆಯ್ಕೆಗೊಂಡ ಸಂದರ್ಭದಲ್ಲಿ ಈ ಕೆರೆ ಅಭಿವೃದ್ಧಿ ಆಗುವ ನಿರೀಕ್ಷೆ ಇನ್ನೂ ಹೆಚ್ಚಿತ್ತು. ಸಂಸದ ನಳಿನ್ ಕುಮಾರ್ ಕಟೀಲ್ ಅವರೂ ಕೆರೆ ಅಭಿವೃದ್ಧಿ ಪಡಿಸುವ ಭರವಸೆ ನೀಡಿದ್ದರು. ಇದೀಗ ಕೆರೆ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಂಡಿದೆ.
ಸಂಸದರ ಆದರ್ಶ ಗ್ರಾಮ ಹಿನ್ನಲೆಯಲ್ಲಿ ಕೆರೆ ಅಭಿವೃದ್ಧಿಗೆ ಗ್ರಾಮಸ್ಥರ ಒತ್ತಾಸೆಯಂತೆ ನಳಿನ್ ಕುಮಾರ್ ಕಟೀಲ್ ಅವರ ಪ್ರಯತ್ನದ ಫಲವಾಗಿ ಸಣ್ಣ ನೀರಾವರಿ ಇಲಾಖೆಯಿಂದ ರೂ. 2 ಕೋಟಿ ಅನುದಾನ ಬಿಡುಗಡೆಗೊಂಡಿದ್ದು. ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡಿದೆ. ಮೊದಲ ಹಂತದ ಅನುದಾನದಲ್ಲಿ ಪ್ರಾಥಮಿಕ ಪ್ರಾಶಸ್ತ್ಯದ ಕಾಮಗಾರಿ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ. ಎರಡನೇ ಹಂತದ ಅನುದಾನದಲ್ಲಿ ಪ್ರವಾಸಿ ತಾಣದ ಹಿನ್ನಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಲಿದೆ ಎನ್ನಲಾಗಿದೆ.
ರೂ. 2 ಕೋಟಿ ಅನುದಾನದಲ್ಲಿ ಕೆರೆಯ ಹೂಳು ತೆರವು ಕಾರ್ಯ ನಡೆಸಲಾಗುತ್ತದೆ. ಕೆರೆಗೆ ರಸ್ತೆ, ಮೇಲ್ಭಾಗದ ನೀರುಪಯುಕ್ತ ನೀರು ಹರಿದು ಬಾರದಂತೆ ತಡೆಗೋಡೆ ನಿರ್ಮಿಸಲಾಗುತ್ತದೆ. ಕೆರೆಯ ಬದಿಯಲ್ಲಿ ಕಾಲುವೆ ನಿರ್ಮಾಣ ಆಗಲಿದೆ. ತಡೆಗೋಡೆ, ಕೆರೆಯನ್ನು ಸಂಪೂರ್ಣವಾಗಿ ಸ್ವಚ್ಚಂಧವಾಗಿಸಿ ಶುದ್ಧ ನೀರು ಸಂಗ್ರಹವಾಗಲು ಯೋಜನೆ ರೂಪಿಸಲಾಗಿದೆ ಎಂದು ತಿಳಿದುಬಂದಿದೆ.
ಐತಿಹಾಸಿಕ ಕೆರೆ;
ಬಳ್ಪದ ಬೋಗಾಯನ ಕೆರೆ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಕದಂಬರ ತುಂಡರಸ ಬೋಗರಾಯವರ್ಮ ಕಡಬ ಪ್ರದೇಶವನ್ನು ಆಳುತ್ತಿದ್ದ ಕಾಲದಲ್ಲಿ ಎರಡು ಕೆರೆಗಳು ನಿರ್ಮಾಣಗೊಂಡಿದ್ದವು. ಇದರಲ್ಲಿ ಒಂದು ಕಡಬದಲ್ಲಿ ಇದ್ದರೆ ಮತ್ತೂಂದು ಕೆರೆ ಬಳ್ಪದಲ್ಲಿ ನಿರ್ಮಿಸಲಾಗಿದೆ ಎಂದು ಇತಿಹಾಸದಿಂದ ತಿಳಿದುಬರುತ್ತದೆ. ಈ ಕೆರೆಯನ್ನು ಬೋಗರಾಯವರ್ಮ ನಿರ್ಮಿಸಿದ ಕಾರಣ ಈ ಕೆರೆ ಬೋಗಾಯನ ಕೆರೆ ಎಂದು ಪ್ರಸಿದ್ಧಿ ಪಡೆದಿದೆ. ಈ ಹಿಂದೆ ವಿಶಾಲವಾಗಿದ್ದ ಕೆರೆ ಬಳಿಕ ನಾಶವಾಗುತ್ತ ಬಂದಿದೆ ಎನ್ನಲಾಗಿದ್ದು. ಪ್ರಸ್ತುತ ಈ ಕೆರೆ ಒಂದುವರೆ ಎಕ್ರೆ ವ್ಯಾಪ್ತಿ ಹಾಗೂ 30 ಅಡಿಗಿಂತಲೂ ಆಳವನ್ನು ಹೊಂದಿದೆ ಎಂದು ತಿಳಿದುಬಂದಿದೆ.
ಬಳ್ಪದ ಈ ಬೋಗಾಯನ ಕೆರೆ ಈ ಹಿಂದೆ ಕೃಷಿ ಉಪಯೋಗಕ್ಕೆ ವರದಾನವಾಗಿತ್ತು. ಆದರೆ ಇದೀಗ ಕೆರೆ ಹೂಳು ತುಂಬಿ, ಕಸ ಕಡ್ಡಿಗಳಿಂದ ಕೂಡಿದೆ. ಕೆರೆ ಅಭಿವೃದ್ಧಿಯಿಂದ ಅಂತರ್ಜಲ ತುಂಬುವ ಜತೆಗೆ ಕೃಷಿಗೆ, ಕುಡಿಯುವ ನೀರಿನ ಉದ್ದೇಶಕ್ಕೂ ಕೆರೆಯ ನೀರನ್ನು ಬಳಸಬಹುದಾಗಿದೆ.
ಪ್ರವಾಸಿ ತಾಣಕ್ಕೂ ಅವಕಾಶ ;
ಬಳ್ಪದ ಕೆರೆ ವಿಶಾಲವಾಗಿದ್ದು ಅಭಿವೃದ್ಧಿ ಪಡಿಸಿ ಪ್ರವಾಸೋದ್ಯಮಕ್ಕೂ ಅವಕಾಶ ನೀಡಬಹುದಾಗಿದೆ. ಇಲ್ಲಿ ಬೋಟಿಂಗ್ ಸಹಿತ ಇತರೆ ಪ್ರವಾಸಿಗರನ್ನು ಆಕರ್ಷಿಸಲು ಚಿಂತಿಸಲಾಗಿತ್ತು.