ಜ.13ರಿಂದ ‘ಚಂದನ’ ದಲ್ಲಿ ಮತ್ತೆ ಪಾಠ ಪ್ರಸಾರ
ಬೆಂಗಳೂರು: ಕೊರೋನಾ ಕಾರಣದಿಂದಾಗಿ 1 ರಿಂದ 9ನೇ ತರಗತಿ ಮಕ್ಕಳಿಗೆ ಭೌತಿಕ ತರಗತಿಗಳು ಕೆಲವು ಜಿಲ್ಲೆಗಳಲ್ಲಿ ಬಂದ್ ಆಗಿದ್ದು, ಮಕ್ಕಳಿಗೆ ಪರ್ಯಾಯ ಕಲಿಕೆ ವ್ಯವಸ್ಥೆ ರೂಪಿಸುವ ಉದ್ದೇಶದಿಂದ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಸೋಮವಾರದಿಂದ ಶುಕ್ರವಾರದವರೆಗೆ ಚಂದನ ವಾಹಿನಿಯಲ್ಲಿ ವಿಡಿಯೋ ಪಾಠ ಪ್ರಸಾರ ಮಾಡಲು ನಿರ್ಧರಿಸಿದೆ. ಜನವರಿ 13ರಿಂದ ದೂರದರ್ಶನ ಚಂದನ ವಾಹಿನಿಯಲ್ಲಿ ವಿಡಿಯೋ ಮೂಲಕ ಪಾಠಗಳನ್ನು ಪ್ರಸಾರಿಸಲಾಗುತ್ತದೆ.
ಕಾಲುವೆಯಲ್ಲಿ ಸಿಕ್ಕಿ ಒದ್ದಾಡಿದ ಗಜಪಡೆ| ಅರಣ್ಯ ಇಲಾಖೆಯಿಂದ ಯಶಸ್ವಿ ಕಾರ್ಯಾಚರಣೆ|
ಮೈಸೂರು : ಕಾಲುವೆಯಲ್ಲಿ ಸಿಲುಕಿದ್ದ ಆನೆಗಳ ಹಿಂಡನ್ನು ಅರಣ್ಯಾಧಿಕಾರಿಗಳು ರಕ್ಷಿಸಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ಕಾಲುವೆಯಿಂದ ಹೊರಬರಲು ಆನೆಗಳು ಹರಸಾಹಸ ಪಡುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಭಾರಿ ಸದ್ದು ಮಾಡಿತ್ತು.
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹನಗೋಡು ಗ್ರಾಮದ ಲಕ್ಷ್ಮಣ ತೀರ್ಥ ನದಿ ನಾಲೆಯಲ್ಲಿ ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದೆ. ಗ್ರಾಮಸ್ಥರು ಆನೆ ಹಿಂಡನ್ನು ಬೆನ್ನಟ್ಟಲು ಯತ್ನಿಸಿದ ಬಳಿಕ ಇವುಗಳು ಕಾಲುವೆಯಲ್ಲಿ ಸಿಲುಕಿಕೊಂಡಿದೆ ಎಂದು ಹಿರಿಯ ಅರಣ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಂತಿಮವಾಗಿ ಆನೆಗಳು ಕಾಲುವೆ ದಾಟಲು ಯಶಸ್ವಿಯಾದ ಸ್ಥಳವನ್ನು ಕಂಡುಕೊಂಡು, ಬಳಿಕ ನಾಗರಹೊಳೆ ಅಭಯಾರಣ್ಯ ಸೇರಿಕೊಂಡಿವೆ.
ಶಾಲೆಗಳಿಗೆ ರಜೆ ಕೊಡಲು ಡಿಸಿಗಳಿಗೆ ಅಧಿಕಾರ – ಸಚಿವ ನಾಗೇಶ್
ಬೆಂಗಳೂರು: ಶಾಲೆ-ಕಾಲೇಜುಗಳಲ್ಲಿ ಕೊರೊನಾ ಸ್ಫೋಟ ಹಿನ್ನಲೆಯಲ್ಲಿ ಶಾಲೆಗಳನ್ನು ಬಂದ್ ಮಾಡಬೇಕಾ, ಮುಂದುವರೆಸಬೇಕೇ? ಬೇಡವೇ? ಎಂಬ ವಿಚಾರವಾಗಿ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಮಹತ್ವದ ಸಭೆ ನಡೆಸಿದ್ದಾರೆ.
‘ಗ್ರೌಂಡ್ ರಿಯಾಲಿಟಿ ಆಧರಿಸಿ, ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಶಾಲೆಗಳನ್ನು ಮುಂದುವರೆಸುವ ಪ್ರಯತ್ನವನ್ನು ನಾವು ಮಾಡುತ್ತೇವೆ. ಟಾಸ್ಕ್‌ಫೋರ್ಸ್ ಜೊತೆಯೂ ಸಭೆ ನಡೆಸಿದ್ದೇವೆ. ತಾಲ್ಲೂಕು ಹಂತಗಳಲ್ಲಿ ಡಿಸಿಗೆ ಅಧಿಕಾರ ಕೊಟ್ಟಿದ್ದೇವೆ. ಸೋಂಕು ಹೆಚ್ಚಾದರೆ ಮತ್ತೊಮ್ಮೆ ಚರ್ಚೆಗೆ ಕೂರುತ್ತೇವೆ’ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.
ಹೈಕೋರ್ಟ್ ಆದೇಶಿಸಿದರೆ ಪಾದಯಾತ್ರೆ ಕೈಬಿಡಲು ಸಿದ್ಧ – ಸಿದ್ದರಾಮಯ್ಯ
ರಾಮನಗರ: ಹೈಕೋರ್ಟ್ ಆದೇಶದ ವಿರುದ್ಧ ಕಾಂಗ್ರೆಸ್ ನಡೆದುಕೊಳ್ಳುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಹೈಕೋರ್ಟ್ ಛೀಮಾರಿ ಹಾಕಿದ ಬೆನ್ನಲ್ಲಿಯೇ ಅವರು ಈ ಕುರಿತು ಮಾತನಾಡಿದ್ದಾರೆ.
ಪಾದಯಾತ್ರೆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕಾನೂನಿಗೆ ತಲೆ ಬಾಗುತ್ತೇವೆ. ಹೈಕೋರ್ಟ್ ಪಾದಯಾತ್ರೆ ನಿಲ್ಲಿಸಲು ಸೂಚಿಸಿದರೆ, ನಾವು ಕೋರ್ಟ್ ಗೆ ತಲೆ ಬಾಗುತ್ತೇವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಯಾವಾಗಲೂ ಕಾನೂನನ್ನು ಗೌರವಿಸುತ್ತದೆ. ಆದರೆ, ಬಿಜೆಪಿಗೆ ಕಾನೂನಿನ ಬಗ್ಗೆ ಗೌರವವಿಲ್ಲ. ಕೋವಿಡ್ ನಿಯಮವನ್ನು ಉಲ್ಲಂಘಿಸಿದ್ದು, ಬಿಜೆಪಿಯೇ ಹೊರತು, ಕಾಂಗ್ರೆಸ್ ಅಲ್ಲ. ಬಿಜೆಪಿ ನಾಯಕರಿಂದಲೇ ಕೋವಿಡ್ ನಿಯಮ ಉಲ್ಲಂಘನೆಯಾಗುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಸದ್ಯ ಪಾದಯಾತ್ರೆ ಕೈಬಿಡುವ ಲಕ್ಷಣಗಳು ಕಾಣುತ್ತಿವೆ.
ಮದುವೆಗೆ ಸಿಂಗರಿಸಿದಂತಿದ್ದ ಕಾರಿನೊಳಗೆ ಅಕ್ರಮ ಗೋಸಾಗಾಟ
ಉಡುಪಿ: ಮದುವೆ ಮನೆಗೆ ಹೊರಟಿರುವಂತೆ ಕಾರಿನ ಹೊರಗಡೆ ಸಿಂಗಾರ ಮಾಡಿ, ಒಳಗಡೆ ಹಸುಗಳ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಭಯಾನಕ ಕೃತ್ಯವೊಂದು ಉಡುಪಿಯಲ್ಲಿ ನಡೆದಿದ್ದು, ಖದೀಮರು ಸಿಕ್ಕಿಬಿದ್ದಿದ್ದಾರೆ. ಗೋವುಗಳನ್ನು ಸಾಗಾಟ ಮಾಡಲು ಖದೀಮರು ಕಂಡುಕೊಂಡಿರುವ ಹೊಸ ಮಾರ್ಗ ಎಲ್ಲರನ್ನೂ ದಂಗುಬಡಿಸಿದೆ.
ಉಡುಪಿ ಜಿಲ್ಲೆ ಕಾಪು ತಾಲೂಕಿನ ಶಿರ್ವದಲ್ಲಿ ಈ ಘಟನೆ ನಡೆದಿದ್ದು, ಇನ್ನೋವಾ ಕಾರನ್ನು ಮದುವೆ ಕಾರಿನಂತೆ ಸಿಂಗರಿಸಿಕೊಂಡು ಯಾರಿಗೂ ಅನುಮಾನ ಬಾರದಂತೆ ಮಾಡಲಾಗಿದೆ. ಅದರಲ್ಲಿ ಕದ್ದ ಹಸುಗಳನ್ನು ತುಂಬಿಕೊಂಡು ಸಾಗಿಸಲಾಗುತ್ತಿತ್ತು. ವಿಷಯ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರಿಗೆ ಗೊತ್ತಾಗಿದ್ದು, ಈ ಕಾರನ್ನು ತಡೆಹಿಡಿದು ಅದರಲ್ಲಿದ್ದ 15 ಕರುಗಳನ್ನು ರಕ್ಷಿಸಿದ್ದಾರೆ.