ರಾಮನಗರ: ಹೈಕೋರ್ಟ್ ಆದೇಶದ ವಿರುದ್ಧ ಕಾಂಗ್ರೆಸ್ ನಡೆದುಕೊಳ್ಳುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಹೈಕೋರ್ಟ್ ಛೀಮಾರಿ ಹಾಕಿದ ಬೆನ್ನಲ್ಲಿಯೇ ಅವರು ಈ ಕುರಿತು ಮಾತನಾಡಿದ್ದಾರೆ.
ಪಾದಯಾತ್ರೆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕಾನೂನಿಗೆ ತಲೆ ಬಾಗುತ್ತೇವೆ. ಹೈಕೋರ್ಟ್ ಪಾದಯಾತ್ರೆ ನಿಲ್ಲಿಸಲು ಸೂಚಿಸಿದರೆ, ನಾವು ಕೋರ್ಟ್ ಗೆ ತಲೆ ಬಾಗುತ್ತೇವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಯಾವಾಗಲೂ ಕಾನೂನನ್ನು ಗೌರವಿಸುತ್ತದೆ. ಆದರೆ, ಬಿಜೆಪಿಗೆ ಕಾನೂನಿನ ಬಗ್ಗೆ ಗೌರವವಿಲ್ಲ. ಕೋವಿಡ್ ನಿಯಮವನ್ನು ಉಲ್ಲಂಘಿಸಿದ್ದು, ಬಿಜೆಪಿಯೇ ಹೊರತು, ಕಾಂಗ್ರೆಸ್ ಅಲ್ಲ. ಬಿಜೆಪಿ ನಾಯಕರಿಂದಲೇ ಕೋವಿಡ್ ನಿಯಮ ಉಲ್ಲಂಘನೆಯಾಗುತ್ತಿದೆ. ಕಾನೂನು ಎತ್ತಿ ಹಿಡಿಯಬೇಕಿದ್ದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಕ್ಷೇತ್ರದಲ್ಲಿಯೇ ಜಾತ್ರೆ ನಡೆದಿದೆ. ನಾವು ಕೋವಿಡ್ ನಿಯಮಗಳನ್ನು ಪಾಲಿಸಿಯೇ ಪಾದಯಾತ್ರೆ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ.
ಈಗಾಗಲೇ ಹೈಕೋರ್ಟ್ ಪಾದಯಾತ್ರೆ ಕುರಿತು ಕಾಂಗ್ರೆಸ್ ನಿಂದ ವರದಿ ಕೇಳಿದ್ದು, ಕೆಪಿಸಿಸಿ ಲೀಗಲ್ ಸೆಲ್ ನ ಅಧ್ಯಕ್ಷರು, ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರನ್ನು ಭೇಟಿಯಾಗಿದ್ದಾರೆ.
ಸದ್ಯದ ಮಾಹಿತಿಯಂತೆ ಕಾಂಗ್ರೆಸ್ ಕೈಗೊಂಡಿರುವ ಪಾದಾಯಾತ್ರೆಯನ್ನು ಇಂದೇ ಕೈ ಬಿಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.