ಉಳ್ಳಾಲ: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿದ್ದು, ಕೊಣಾಜೆ ಠಾಣಾ ಪೊಲೀಸರು ಅವರು ತಲೆಮರೆಸಿಕೊಂಡಿದ್ದಾಗಿ ತಿಳಿಸಿದ್ದಾರೆ.
ಗ್ರಾ.ಪಂ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷೆ ಚಂಚಲಾಕ್ಷಿ ತಲೆಮರೆಸಿಕೊಂಡಿದ್ದಾರೆ. ಈಕೆ ಮಮತಾ ಶೈನಿ ಡಿಸೋಜ ಎಂಬುವರಿಗೆ ಅಂದಾಜು 3 ಲಕ್ಷ ರೂ. ಚೆಕ್ ನೀಡಿದ್ದು, ಇದು ಬೌನ್ಸ್ ಆಗಿದೆ. ಈ ಪ್ರಕರಣದಲ್ಲಿ ಚಂಚಲಾಕ್ಷಿ ಆರೋಪಿಯಾಗಿದ್ದು, ಇದೀಗ ತಲೆಮರೆಸಿಕೊಂಡಿದ್ದಾರೆ. 2020ರ ಜ.6 ರಂದು ಪ್ರಕರಣ ಸಂಬಂಧ ಕೇಸ್ ದಾಖಲಾಗಿತ್ತು. ಆ ಬಳಿಕ ನ್ಯಾಯಾಲಯದಲ್ಲಿ ಒಂಬತ್ತು ಬಾರಿ ವಾದ-ಪ್ರತಿವಾದಗಳು ನಡೆದಿದ್ದು, ಇದೀಗ ನ್ಯಾಯಾಲಯ ಬಂಧನದ ಆದೇಶ ಹೊರಡಿಸಿದೆ.
ಕೊಣಾಜೆ ಠಾಣಾ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದು, ಆರೋಪಿ ಚಂಚಲಾಕ್ಷಿ ಕೊಣಾಜೆ ಗ್ರಾಮದ ಪ್ರಥಮ ಪ್ರಜೆಯಾಗಿದ್ದಾರೆ. ಆದರೆ ಇದೀಗ ಅಪರಾಧ ಪ್ರಕರಣದಲ್ಲಿ ಸಿಲುಕಿರುವುದರಿಂದ ಕೂಡಲೇ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿಗರು ಒತ್ತಾಯಿಸಿದ್ದಾರೆ.
ಜ.7 ರಂದು ಬಂಧನದ ವಾರೆಂಟ್ ಜಾರಿಯಾಗಿದ್ದು, ಪೊಲೀಸರು ಆರೋಪಿಯನ್ನು ಹಿಡಿದಿರಲಿಲ್ಲ. ಹಾಗಾಗಿ ಉಳ್ಳಾಲ ನಿವಾಸಿ ಮಮತಾ ಶೈನಿ ಡಿಸೋಜ ಅವರು ಸಹಾಯಕ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿದ್ದರು. ಬಳಿಕ ಕೊಣಾಜೆ ಪೊಲೀಸರ ಜೊತೆಗೆ ಶೈನಿಯವರು ಆಕೆಯ ಮನೆ, ಪಂಚಾಯಿತಿಗೆ ಹೋಗಿದ್ದಾರೆ. ಆದರೆ ಆಕೆ ಪತ್ತೆಯಾಗಿಲ್ಲ. ಅಲ್ಲದೇ ಮನೆಗೆ ಬೀಗ ಹಾಕಲಾಗಿತ್ತು. ಮೊಬೈಲ್ ಸ್ವಿಚ್ ಆಫ್ ಆಗಿದ್ದು, ನಾನು ಪೊಲೀಸ್ ಠಾಣೆಗೆ ಎರಡು ದಿನಗಳಿಂದ ಅಲೆದಾಡುತ್ತಿದ್ದೇನೆ ಎಂದು ಮಮತಾ ಶೈನಿ ಡಿಸೋಜ ಹೇಳಿದ್ದಾರೆ.