ಮೈಸೂರು : ಕಾಲುವೆಯಲ್ಲಿ ಸಿಲುಕಿದ್ದ ಆನೆಗಳ ಹಿಂಜನ್ನು ಅರಣ್ಯಾಧಿಕಾರಿಗಳು ರಕ್ಷಿಸಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ಕಾಲುವೆಯಿಂದ ಹೊರಬರಲು ಆನೆಗಳು ಹರಸಾಹಸ ಪಡುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಭಾರಿ ಸದ್ದು ಮಾಡಿತ್ತು.
ಸಾಮಾಜಿಕ ಮಾಧ್ಯಮ ಸೈಟ್‌ಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ, ಐದು ಆನೆಗಳು ಕಾಲುವೆಯಿಂದ ಹೊರಬರಲು ಅನೇಕ ಬಾರಿ ಪ್ರಯತ್ನಿಸಿದ್ರೂ ಸಾಧ್ಯವಾಗಿಲ್ಲ. ಅವುಗಳು ಕಾಲುವೆ ಏರಲು ಪ್ರಯತ್ನಿಸಿದರೂ ಜಾರಿ ಕಾಲುವೆಗೆ ಬೀಳುತ್ತಿದ್ದವು.
ಕಾಲುವೆಯಿಂದ ಹೊರಬರಲು ಹೆಣಗಾಡುತ್ತಿರುವ ಗಜಪಡೆಯ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸುಶಾಂತ್ ನಂದಾ ಹಂಚಿಕೊಂಡಿದ್ದಾರೆ. ವಿಡಿಯೋಗೆ ʼಅರಣ್ಯ ಇಲಾಖೆಯಿಂದ ರಕ್ಷಿಸಲ್ಪಟ್ಟ ಅದೃಷ್ಟವಂತರು ನಾವುʼ ಎಂಬ ಶೀರ್ಷಿಕೆ ನೀಡಿ ಪೋಸ್ಟ್ ಮಾಡಿದ್ದಾರೆ.
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹನಗೋಡು ಗ್ರಾಮದ ಲಕ್ಷ್ಮಣ ತೀರ್ಥ ನದಿ ನಾಲೆಯಲ್ಲಿ ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದೆ. ಗ್ರಾಮಸ್ಥರು ಆನೆ ಹಿಂಡನ್ನು ಬೆನ್ನಟ್ಟಲು ಯತ್ನಿಸಿದ ಬಳಿಕ ಇವುಗಳು ಕಾಲುವೆಯಲ್ಲಿ ಸಿಲುಕಿಕೊಂಡಿದೆ ಎಂದು ಹಿರಿಯ ಅರಣ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ. ನೀರಿನ ರಭಸಕ್ಕೆ ಆನೆಗಳು ಕಾಲುವೆಯಿಂದ ಹೊರಬರಲು ಸಾಧ್ಯವಾಗದೆ ಕೆಲಕಾಲ ಪರದಾಡುವಂತಾಯಿತು.
ಅಂತಿಮವಾಗಿ ಆನೆಗಳು ಕಾಲುವೆ ದಾಟಲು ಯಶಸ್ವಿಯಾದ ಸ್ಥಳವನ್ನು ಕಂಡುಕೊಂಡವು. ಆನೆಗಳಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ. ಕಾಲುವೆಯಿಂದ ಹೊರಬಂದ ನಂತರ ಗಜಪಡೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶವನ್ನು ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.