ಒಬ್ಬ ಮನುಷ್ಯ ತನ್ನ ಜೀವನದಲ್ಲಿ ಎಷ್ಟು ಅಧ್ಯಯನ ಮಾಡಬಹುದು; ಎಷ್ಟು ಮಾತನಾಡಬಹುದು ಎಂದು ಲೆಕ್ಕ ಹಾಕಿ ಒಂದು ನಿಷ್ಕರ್ಶೆಗೆ ಬಂದರೆ, ಆ ಎಲ್ಲ ಲೆಕ್ಕಾಚಾರಗಳನ್ನು ಮೀರಿ ನಿಲ್ಲುವವರು ಸ್ವಾಮಿ ವಿವೇಕಾನಂದರು. ಅವರ ವಿಚಾರಗಳು ಅಷ್ಟು ಆಳ, ಅಷ್ಟು ವಿಸ್ತಾರವಾದವು.
ಬದುಕಿದ್ದು ಕೇವಲ 39 ವರ್ಷಗಳಾದರೂ, ವಿಶ್ವದ ಮೇಲೆ ಅವರ ಪ್ರಭಾವ ಮಾತ್ರ ಅನನ್ಯ. ತಲೆಮಾರಿನಿಂದ ತಲೆಮಾರಿಗೆ ಅವರು ಪ್ರೇರಣೆಯ ಸ್ರೋತವಾಗಿಯೇ ಇದ್ದಾರೆ; ಮುಂದೆಯೂ ಇರುವುದರಲ್ಲಿ ಯಾವ ಸಂಶಯವೂ ಇಲ್ಲ. ಸಾಧಾರಣವಾಗಿ, ಯಾವುದೇ ಮಹಾಪುರುಷರೊಬ್ಬರ ವಿಚಾರಗಳು ದೀರ್ಘಕಾಲ ನಿಲ್ಲುವುದರಿಂದ, ಅಂತಹವರ ವಿಚಾರಗಳ ಬಗ್ಗೆ ನೂರಾರು ವರ್ಷಗಳ ಬಳಿಕವೂ ಚರ್ಚೆಗಳು ನಡೆಯುವುದು ಸಾಮಾನ್ಯ. ಸ್ವಾಮಿ ವಿವೇಕಾನಂದರು ಇಂತಹ ಸಾಲಿಗೆ ಸೇರುವವರು.
‘ನಮ್ಮ ಪೂರ್ವಜರ ಬಗ್ಗೆ ಎಂದಿಗೂ ಲಜ್ಜೆ ಪಡಬಾರದೆಂಬುದೇ ನನ್ನ ಜೀವನದ ಒಂದು ಮುಖ್ಯ ಸಿದ್ಧಾಂತ. ಈ ಲೋಕದಲ್ಲಿ ಜನಿಸಿದ ಅತ್ಯಂತ ಸ್ವಾಭಿಮಾನಿ ಪುರುಷರ ಪೈಕಿ ನಾನೊಬ್ಬ. ಆದರೆ, ಅದು ನನ್ನ ಕಾರಣದಿಂದ ಅಲ್ಲ, ನನ್ನ ಪೂರ್ವಜರ ಕಾರಣದಿಂದಾಗಿ. ನಾನು ಹಿಂದೆ ತಿರುಗಿ ನೋಡಿದಷ್ಟೂ ಹಿಂದಿನದನ್ನು ಅಭ್ಯಸಿಸಿದಷ್ಟೂ ಅಧಿಕಾಧಿಕವಾಗಿ ಈ ಸ್ವಾಭಿಮಾನ ನನ್ನೆದೆಯನ್ನು ತುಂಬಿದೆ’ – ಎಂದು ಒಂದೆಡೆ ಹೇಳುವ ವಿವೇಕಾನಂದರು, ಮತ್ತೊಂದೆಡೆ ಭಾರತದ ಮೇಲ್ವರ್ಗದವರನ್ನು ಹೇಗೆ ತಿವಿಯುತ್ತಾರೆ ನೋಡಿ: ‘ನೀವು ಆರ್ಯವಂಶದವರೆಂದು ಎಷ್ಟೇ ಮೆರೆದಾಡಿರಿ, ಭಾರತದ ಗತವೈಭವದ ಬಗ್ಗೆ ಎಷ್ಟೇ ಗುಣಗಾನ ಮಾಡಿರಿ; ನಿಮ್ಮ ಜನ್ಮಜಾತ ಗರಿಮೆಯ ಬಗ್ಗೆ ನೀವು ಎಷ್ಟೇ ಬಡಾಯಿ ಕೊಚ್ಚಿರಿ, ಆದರೆ ಭಾರತದಲ್ಲಿನ ಉಚ್ಚವರ್ಗೀಯರಾದ ನೀವು ಈಗ ಬದುಕಿರುವೆವೆಂದು ತಿಳಿದಿರುವಿರೇನು? ಹತ್ತು ಸಾವಿರ ವರ್ಷಗಳ ಹಿಂದಿನ ಮಮ್ಮಿಗಳಂತೆ ನೀವಿದ್ದೀರಿ….. ನಿಮ್ಮ ಮನೆ, ನಿಮ್ಮ ಸಲಕರಣೆಗಳು ಪ್ರಾಚೀನ ವಸ್ತುಸಂಗ್ರಹಾಲಯದಲ್ಲಿ ಇಡಲು ಲಾಯಕ್ಕಾದವು. ಅಷ್ಟು ನಿರ್ಜೀವತೆ, ಅಷ್ಟು ಹಳೆತನ. …… ರೈತರ ಗುಡಿಸಲಿಂದ ನೇಗಿಲು ಹಿಡಿದು ಭಾರತಿಯು ಮೇಲೇಳಲಿ. ಬೆಸ್ತರ ಚಮ್ಮಾರರ ಜಲಗಾರರ ಜೋಪಡಿಗಳಿಂದ ಅವಳು ಹೊರಬೀಳಲಿ. ಮಳಿಗೆಗಳಿಂದ, ಕುಂಬಾರರ ಭಟ್ಟಿಗಳಿಂದ, ಕಾರ್ಖಾನೆಗಳಿಂದ, ಅಂಗಡಿಗಳಿಂದ, ಪೇಟೆಗಳಿಂದ ಅವಳು ಮೂಡಿಬರಲಿ….. ಈ ಎಲ್ಲ ಜನಸಾಮಾನ್ಯರು ಸಾವಿರಾರು ವರ್ಷಗಳ ದಬ್ಬಾಳಿಕೆಯಲ್ಲಿ ನರಳಿದ್ದಾರೆ. ‘ಚ’ಕಾರ ಸಹ ಎತ್ತದೇ ಎಲ್ಲವನ್ನೂ ಸಹಿಸಿದ್ದಾರೆ. ಅದರಿಂದಾಗಿ ಅವರಿಗೆ ಅದ್ಭುತ ಸಹನಶಕ್ತಿ ಬಂದಿದೆ. ಅವರು ಅನುಭವಿಸಿರುವ ಅಪಾರ ಕಷ್ಟ-ಸಂಕಟಗಳಿಂದಾಗಿ ದುರ್ದಮ್ಯ ಜೀವನಶಕ್ತಿ ಅವರಲ್ಲಿ ಬೆಳೆದಿದೆ. ಒಂದು ತುತ್ತು ಅನ್ನ ಅವರಿಗೆ ಹಾಕಿ. ಇಡೀ ಜಗತ್ತನ್ನೇ ಅವರು ಅಲ್ಲೋಲಕಲ್ಲೋಲ ಮಾಡಿಯಾರು. ತುಂಡು ರೊಟ್ಟಿ ಕೊಡಿ ಸಾಕು. ಅವರ ಪರಾಕ್ರಮಕ್ಕೆ ಇಡೀ ಜಗತ್ತು ಸಾಲದಾದೀತು…’ ಹೀಗೆ ಸಾಗುತ್ತದೆ, ಅವರ ಮಾತು.
ಭಗವದ್ಗೀತೆಯನ್ನು ಓದುವುದಕ್ಕಿಂತ ಯುವಕರು ಫುಟ್ಬಾಲ್ ಆಟವಾಡಿ, ಶಾರೀರಿಕ ದೃಢತೆ ಬೆಳೆಸಿಕೊಳ್ಳಬೇಕು ಎಂಬ ಅವರ ಮಾತಾಗಲೀ, ಆಧುನಿಕ ವಿಜ್ಞಾನಕ್ಕೆ ಅವರು ಕೊಟ್ಟ ಮಹತ್ತ್ವವಾಗಲೀ ನಾವು ಗಮನಿಸಬೇಕಾದವು. ‘ಆನೋ ಭದ್ರಾಃ ಕೃತವೋ ಯಂತು ವಿಶ್ವತಃ’ ಎಂಬಂತೆ, ಅದು ಪಶ್ಚಿಮದ್ದು, ಇದು ಪೂರ್ವದ್ದು ಎಂಬ ಭೇದವನ್ನು ಅವರು ಗಣಿಸಲಿಲ್ಲ. ಪಶ್ಚಿಮದ ಆಧುನಿಕ ವಿದ್ಯೆಯನ್ನೂ ಕೈಗಾರಿಕೆಗಳನ್ನೂ ಸ್ವಾಗತಿಸಿದ ಅವರು, ಧರ್ಮವೇ ಭಾರತದ ಆತ್ಮ, ಅದಿಲ್ಲದೇ ಭಾರತವೆಂಬ ರಾಷ್ಟ್ರಕ್ಕೆ ಅಸ್ತಿತ್ವವಿಲ್ಲ; ಅದನ್ನು ಬಿಟ್ಟು ನಮ್ಮ ರಾಷ್ಟ್ರದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದವರು. ಅವರ ಒಂದೆರಡು ಭಾಷಣವನ್ನು ಮಾತ್ರ ಓದಿ, ಅವರು ಇಂತಹವರು ಎಂದು ಹೇಳಲು ಸಾಧ್ಯವಿಲ್ಲ. ಅವರನ್ನು ತಿಳಿಯುತ್ತಾ ಹೋದಂತೆ, ಅವರೊಬ್ಬ ಭಾರತೀಯ ಋಷಿಪರಂಪರೆಯಲ್ಲಿ ಬಂದ ಮಾನವಧರ್ಮದ ಪ್ರತಿಪಾದಕರಾಗಿದ್ದವರು; ಲೋಕಹಿತವಲ್ಲದೇ ಬೇರಾವುದೂ ಅವರ ವಿಚಾರದಲ್ಲಿಲ್ಲ ಎಂಬುದು ನಮ್ಮ ಅರಿವಿಗೆ ಬರುತ್ತದೆ. ಇಂತಹ ಮಹಾಪುರುಷರನ್ನು ಒಂದು ‘ಇಸಂ’ ಅನ್ನು ಪ್ರತಿಪಾದಿಸುವರು ಅಥವಾ ಇನ್ನೊಂದನ್ನು ವಿರೋಧಿಸುವವರು ಎಂಬ ದೃಷ್ಟಿಯಲ್ಲಿ ನೋಡುವುದು; ಅವರು ಯಾವ ಆಹಾರ ಸೇವಿಸುತ್ತಿದ್ದರು ಎಂಬುದರ ಮೇಲೆ ಅವರು ಇಂತಹವರು ಎಂದು ನಿರ್ಣಯ ಮಾಡುವುದು, ನಮ್ಮ ಬುದ್ಧಿಯ ದಾರಿದ್ರ್ಯವನ್ನು ತೋರಿಸುತ್ತದೆ ಅಷ್ಟೇ.
ಸ್ವಾಮಿ ವಿವೇಕಾನಂದರನ್ನು ಸರಿಯಾಗಿ ತಿಳಿಯಲು ಅವರ ಜೀವನ ಹಾಗೂ ವಿಚಾರಗಳ ಸಮಗ್ರ ಅಧ್ಯಯನವೊಂದೇ ದಾರಿ. ಆ ದಾರಿ ನಮ್ಮದಾಗಲಿ.
ಕೃಪೆ: ಪ್ರಜಾವಾಣಿ