ಮಂಗಳೂರು: ಸಾಲೆತ್ತೂರು ಎಂಬಲ್ಲಿ ಮದುಮಗ ಕೊರಗಜ್ಜನ ವೇಷ ಧರಿಸಿ ಅವಮಾನ ಮಾಡಿದ ವಿಚಾರಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಮದುಮಗ ಉಮರುಲ್ ಭಾತೀಷ್ ವೀಡಿಯೋ ಮೂಲಕ ಕ್ಷಮೆ ಕೇಳಿದ್ದಾನೆ. ಕಳೆದ ಬುಧವಾರ ನಡೆದ ಮದುವೆ ದಿನ ರಾತ್ರಿ ಅಝೀಝ್ ಮನೆಗೆ ತನ್ನ ಐವತ್ತಕ್ಕೂ ಹೆಚ್ಚು ಸ್ನೇಹಿತರ ಜೊತೆ ಪ್ರಥಮ ರಾತ್ರಿಗೆ ಬಂದ ಮದುಮಗ ಕೊರಗಜ್ಜನ ವೇಷ ಭೂಷಣ ಹಾಕಿ ನಡುರಸ್ತೆಯಲ್ಲೇ ಕುಣಿದು ಕುಪ್ಪಳಿಸುವ ಮೂಲಕ ತುಳುನಾಡಿನ ಹಿಂದೂ ಸಮುದಾಯದ ಆರಾಧ್ಯ ದೈವ ಕೊರಗಜ್ಜನ ನಿಂದನೆ, ಅವಮಾನ ಎಸಗಿದ ವೀಡಿಯೋಗಳು ಭಾರೀ ವೈರಲಾಗಿತ್ತು.
ವೀಡಿಯೋಗಳು ವೈರಲಾಗುತ್ತಿದ್ದಂತೆ ಹಿಂದೂ ಸಮುದಾಯ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ಸ್ವತ: ಮುಸ್ಲಿಂ ಸಮುದಾಯದವರೂ ಕೂಡಾ ಹುಚ್ಚಾಟದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ಜಿಲ್ಲೆಯಾದ್ಯಂತ ಬೀದಿಗಿಳಿದ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿ ಅಲ್ಲಲ್ಲಿ ದೂರು ದಾಖಲಿಸಿವೆ. ಇದರಿಂದ ಕಂಗೆಟ್ಟ ಮದುಮಗ ಭಾತೀಷ್ ಕೇರಳದ ಅಜ್ಞಾತ ಸ್ಥಳದಿಂದ ವೀಡಿಯೋ ಮೂಲಕ ಕ್ಷಮಾಪಣೆ ಕೇಳುತ್ತಾ ವಿಷಾದ ವ್ಯಕ್ತಪಡಿಸಿದ್ದಾನೆ.
“ನಾನು ತನ್ನ ಸ್ನೇಹಿತರ ಜೊತೆ ಎಂಜಾಯ್ ಮಾಡುವುದಕ್ಕಾಗಿ ಈ ರೀತಿ ಮಾಡಿದ್ದೇನೆಯೇ ಹೊರತು ಯಾವುದೇ ಸಮುದಾಯಕ್ಕಾಗಲೀ, ದೈವಕ್ಕಾಗಲೀ, ಜನರ ನಂಬಿಕೆಗಾಗಲೀ ದ್ರೋಹ, ಅವಮಾನ ಮಾಡುವ ಉದ್ದೇಶವಿಲ್ಲ. ಮುಸ್ಲಿಂ ಸಮುದಾಯಕ್ಕೂ ಅವಮಾನ ಎಸಬೇಕೆಂಬ ಉದ್ದೇಶ ನನಗಿಲ್ಲ” ಎಂದು ಹೇಳುತ್ತಾ ವಿಷಾದ ವ್ಯಕ್ತಪಡಿಸಿದ್ದಾನೆ.