ಉಪ್ಪಿನಂಗಡಿ: ಉಪ್ಪಿನಂಗಡಿಯಲ್ಲಿ ಹಿಂದೂ ಮುಖಂಡರ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿದ್ದ ಇಬ್ಬರು ಎಸ್.ಡಿ.ಪಿ.ಐ ನಾಯಕರಿಗೆ ಜಾಮೀನು ಮಂಜೂರಾಗಿದೆ.
ಡಿ.6 ರಂದು ಸಂಜೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಸುಬ್ರಹ್ಮಣ್ಯ ಕ್ರಾಸ್ ನ ಅಶೋಕ್ ಶೆಟ್ಟಿ ಮಾಲಕತ್ವದ ಹಸಿ ಮೀನು ಮಾರುಕಟ್ಟೆಗೆ ಆರು ಜನರ ತಂಡ ಬೈಕ್ ನಲ್ಲಿ ಬಂದು ತಲವಾರು ದಾಳಿ ಮಾಡಿದೆ. ಅಂಗಡಿಯಲ್ಲಿದ್ದ ಅಶೋಕ್ ಶೆಟ್ಟಿ ಮೋಹನ್ ದಾಸ್ ಶೆಟ್ಟಿ ಮತ್ತು ಮಹೇಶ್ ಎಂಬ ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ತಲವಾರು ದಾಳಿ ಮಾಡಿ ಕೊಲೆ ಯತ್ನ ಪ್ರಯತ್ನಿಸಿದ ಕುರಿತು ಪ್ರಕರಣ ಕೂಡ ದಾಖಲಾಗಿತ್ತು.
ಉಪ್ಪಿನಂಗಡಿ ಪೊಲೀಸರು ತನಿಖೆ ನಡೆಸಿ ಎಸ್.ಡಿ.ಪಿ.ಐ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು ಇದ್ದಾರೆ ಎಂದು ಸಂಶಯ ವ್ಯಕ್ತಪಡಿಸಿ ಪಿಎಫ್ಐ ಜಿಲ್ಲಾಧ್ಯಕ್ಷ ಅಬ್ದುಲ್ ರಜಾಕ್ ಮೆಜೆಸ್ಟಿಕ್ , ಸಂಘಟನೆಯ ಸ್ಥಳೀಯ ನಾಯಕರಾದ ಝಕರಿಯ ಕೊಡಿಪ್ಪಾಡಿ ಮತ್ತು ಎಸ್ ಡಿ ಪಿ ಐ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಮುಸ್ತಫ ಕಡವಿನ ಬಾಗಿಲು ಎಂಬವರನ್ನು ವಿಚಾರಣೆಗೆ ಒಳಪಡಿಸಿ ಈ ಪ್ರಕರಣದ ಸಂಚು ರೂಪಿಸಿದ್ದಾರೆ ಎಂದು ಬಂಧಿಸಿದ್ದರು.
ಈ ಸುದ್ದಿ ಹರಡುತ್ತಿದ್ದಂತೆ ಡಿ.14 ರಂದು ಉಪ್ಪಿನಂಗಡಿ ಪೊಲೀಸ್ ಠಾಣೆಯ ಎದುರು ಭಾಗದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಎಸ್ ಡಿ ಪಿ ಐ ಕಾರ್ಯಕರ್ತರು ಪ್ರತಿಭಟನೆಯನ್ನು ಮಾಡಿ ತನ್ನ ನಾಯಕರ ಅಕ್ರಮ ಬಂಧನದ ಕುರಿತು ಅಸಹನೆಯನ್ನು ವ್ಯಕ್ತಪಡಿಸಿದ್ದರು. ಬೆಳಿಗ್ಗೆಯಿಂದಲೇ ಪ್ರತಿಭಟನೆ ನಡೆಸಿದ ಪಿಎಫ್ಐ ಕಾರ್ಯಕರ್ತರ ಒತ್ತಾಯಕ್ಕೆ ಮಣಿದ ಸರ್ಕಾರ ಪ್ರಕರಣದಲ್ಲಿ ಬಂಧಿತ ಪಿಎಫ್ಐ ಜಿಲ್ಲಾಧ್ಯಕ್ಷ ಅಬ್ದುಲ್ ರಜಾಕ್ ಮೆಜೆಸ್ಟಿಕ್ ನನ್ನು ಬಿಡುಗಡೆಗೊಳಿಸಿದ್ದರು.