ಉತ್ತರ ಪ್ರದೇಶ: “ಉತ್ತರ ಪ್ರದೇಶದಲ್ಲಿ ಈ ಹಿಂದೆ ಅಪರಾಧಿಗಳು ಮತ್ತು ಮಾಫಿಯಾದವರು ಆಟವಾಡುತ್ತಿದ್ದರು. ಆದರೆ ಈಗ ಯೋಗಿ ಆದಿತ್ಯನಾಥ್ ಸರ್ಕಾರ ಅವರೊಂದಿಗೆ ’ಜೈಲ್-ಜೈಲ್’ ಆಟವಾಡುತ್ತಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ಹಿಂದಿನ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೀರತ್‌ನ ಮೇಜರ್ ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಿದ್ದರು.
‘ಹಿಂದಿನ ಸರ್ಕಾರದ ಅವಧಿಯಲ್ಲಿ ಕ್ರಿಮಿನಲ್‌ಗಳು, ಮಾಫಿಯಾ ಆಟವಾಡುತ್ತಿತ್ತು. ಈ ಹಿಂದೆ ಅಕ್ರಮವಾಗಿ ಭೂಮಿಯನ್ನು ಕಸಿದುಕೊಳ್ಳಲಾಗುತ್ತಿತ್ತು. ಹೆಣ್ಣುಮಕ್ಕಳ ಬಗ್ಗೆ ಕೆಟ್ಟ ಟೀಕೆಗಳನ್ನು ಮಾಡುವ ಪೋಲಿಗಳು ಬಹಿರಂಗವಾಗಿ ತಿರುಗಾಡುತ್ತಿದ್ದರು. ಹಿಂದಿನ ಸರ್ಕಾರವು ಕ್ರಿಮಿನಲ್‌ಗಳು ಮತ್ತು ಮಾಫಿಯಾಗಳ ಆಟಗಳಲ್ಲಿ ಹೇಗೆ ತೊಡಗಿಸಿಕೊಂಡಿದೆ ಎಂಬುದನ್ನು ಮೀರತ್‌ನ ಜನ ಎಂದಿಗೂ ಮರೆಯಲು ಸಾಧ್ಯವಿಲ್ಲ’ ಎಂದಿದ್ದಾರೆ.
“ಆದರೆ, ಈಗ ಯೋಗಿ ಆದಿತ್ಯನಾಥ್ ಸರ್ಕಾರವು ಅಂತಹ ಅಪರಾಧಿಗಳೊಂದಿಗೆ ‘ಜೈಲ್-ಜೈಲ್’ ಆಟವಾಡುತ್ತಿದೆ, ಐದು ವರ್ಷಗಳ ಹಿಂದೆ, ಮೀರತ್‌ನ ಹೆಣ್ಣುಮಕ್ಕಳು ಸಂಜೆಯ ನಂತರ ತಮ್ಮ ಮನೆಯಿಂದ ಹೊರಬರಲು ಭಯಪಡುತ್ತಿದ್ದರು, ಇಂದು ಮೀರತ್‌ನ ಹೆಣ್ಣುಮಕ್ಕಳು ಇಡೀ ದೇಶವೇ ಹೆಮ್ಮೆ ಪಡುವಂತೆ ಪ್ರಶಸ್ತಿಗಳನ್ನು ತರುತ್ತಿದ್ದಾರೆ” ಎಂದು ಮೋದಿ ಹೇಳಿದ್ದಾರೆ.