ರಾಯಚೂರು : ಹೊಸ ವರ್ಷದ ಹಿನ್ನೆಲೆ ಕಿಡಿಕೇಡಿಗಳು ಸರಕಾರಿ ಶಾಲೆಯಲ್ಲಿ ಎಣ್ಣೆ ಪಾರ್ಟಿ ಮಾಡಿದ ಘಟನೆಯೊಂದು ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ರಬ್ಬಣಕಲ್ ಕ್ಯಾಂಪ್ನ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಶಾಲೆಯ ಬೀಗ ಒಡೆದು ಕೊಠಡಿಯೊಳಗೆ ನುಗ್ಗಿ ಎಣ್ಣೆ ಪಾರ್ಟಿ ಮಾಡಿದ್ದು ಮಾತ್ರವಲ್ಲದೇ ಬಿಸಿಯೂಟದ ಸಾಮಗ್ರಿಗಳನ್ನು ಬಳಕೆ ಮಾಡಿ ಮೊಟ್ಟೆ ಬೇಯಿಸಿಕೊಂಡು ಮಾಂಸಾಹಾರ ತಯಾರಿಸಿ ದುಷ್ಕೃತ್ಯ ಮೆರೆದಿದ್ದಾರೆ. ಪಾರ್ಟಿಗೆ ಬಳಸಲಾದ ವಸ್ತುಗಳು ಎಲ್ಲೆಂದರಲ್ಲಿ ಬಿಸಾಡಲಾಗಿದೆ. ಅಲ್ಲದೇ ಶಾಲೆಗೆ ಸೇರಿದ ದಾಖಲೆಗಳಿಗೂ ಹಾನಿ ಉಂಟು ಮಾಡಿದ್ದಾರೆ. ಬೆಳಗ್ಗೆ ಶಾಲೆಗೆ ಬರುತ್ತಿದ್ದಂತೆಯೇ ಈ ವಿಚಾರ ಶಾಲಾ ಶಿಕ್ಷಕರ ಗಮನಕ್ಕೆ ಬಂದಿದೆ. ಕೂಡಲೇ ಮಾನ್ವಿ ಠಾಣೆಗೆ ತೆರಳಿದ ಶಾಲಾ ಮುಖ್ಯೋಪಾಧ್ಯಾಯರು ತಪ್ಪಿತಸ್ಥರನ್ನು ಕಂಡು ಹಿಡಿಯುವಂತೆ ಕೋರಿ ದೂರನ್ನು ನೀಡಿದ್ದಾರೆ.
ಶಾಲೆಯ ಕೊಠಡಿಯಲ್ಲಿ ಮಾಂಸಹಾರ ಹಾಗೂ ಮದ್ಯದ ಬಾಟಲಿ ಪತ್ತೆಯಾಗಿದೆ. ಅಲ್ಲದೇ ಶಾಲಾ ಬಿಸಿಯೂಟದ ಕೊಠಡಿಯೊಳಗೆ ನುಗ್ಗಿರುವ ಕಳ್ಳರು ಅಲ್ಲೇ ಅಡುಗೆಯನ್ನು ತಯಾರಿಸಿದ್ದು ಮಾತ್ರವಲ್ಲದೇ ವಿದ್ಯಾರ್ಥಿಗಳಿಗೆ ಸೇರಿದ ಅಕ್ಕಿ, ಸಕ್ಕರೆ, ಹಾಲಿನ ಪುಡಿ, ಅಡುಗೆ ಎಣ್ಣೆಯನ್ನು ಕದ್ದಿದ್ದಾರೆ. ಬೆಳಗ್ಗೆ ಶಾಲೆಗೆ ಆಗಮಿಸಿದ ಶಿಕ್ಷಕರಿಗೆ ಶಾಲೆ ಅಸ್ತವ್ಯಸ್ತವಾಗಿರೋದು ಗೋಚರವಾಗಿದೆ. ಮದ್ಯದ ಬಾಟಲಿಗಳು ಕಣ್ಣಿಗೆ ಕಾಣುತ್ತಿದ್ದಂತೆಯೇ ಇಲ್ಲಿ ನ್ಯೂ ಯಿಯರ್ ಪಾರ್ಟಿ ನಡೆದಿದೆ ಎನ್ನುವುದು ದೃಢಪಟ್ಟಿದೆ. ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿರುವ ಪೊಲೀಸರು ತಪ್ಪಿತಸ್ಥರ ಪತ್ತೆಗೆ ಬಲೆ ಬೀಸಿದ್ದಾರೆ.