ಮಡಿಕೇರಿ:- ಸಂಘವೊಂದಕ್ಕೆ ಹಣ ಪಾವತಿಸಲು ಹೋಗಿದ್ದ ವ್ಯಕ್ತಿಯೊಬ್ಬರು ನಾಲ್ಕು ದಿನಗಳ ಬಳಿಕ ಶವವಾಗಿ ಪತ್ತೆಯಾದ ಘಟನೆ ಮಡಿಕೇರಿ ತಾಲೂಕಿನ ಪಾಲೂರು ಗ್ರಾಮದಲ್ಲಿ ನಡೆದಿದೆ.
ಮೂರ್ನಾಡು ನಿವಾಸಿ ಗಿರೀಶ್(38) ಎಂಬವರೇ ಮೃತಪಟ್ಟ ವ್ಯಕ್ತಿಯಾಗಿದ್ದು, ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಮಾರು 6 ತಿಂಗಳ ಹಿಂದೆ ಪಾಲೂರು ವ್ಯಾಪ್ತಿಯಲ್ಲಿ ತೋಟ ಕೆಲಸ ಮಾಡುತ್ತಿದ್ದ ಗಿರೀಶ್, ನಂತರದ ದಿನಗಳಲ್ಲಿ ಮೂರ್ನಾಡು ಗ್ರಾಮದಲ್ಲೇ ನೆಲೆಸಿದ್ದರು. ಡಿ.27ರಂದು ಪಾಲೂರು ಗ್ರಾಮಕ್ಕೆ ತೆರಳಿದ ಗಿರೀಶ್ 1,200 ರೂ.ಗಳನ್ನು ಸಂಘವೊಂದಕ್ಕೆ ಪಾವತಿಸಿ ಪತ್ನಿಗೆ ಮೊಬೈಲ್ ಮೂಲಕ ಮಾಹಿತಿ ನೀಡಿದ್ದರು. ನಂತರ 4 ದಿನ ಕಳೆದರೂ ಗಿರೀಶ್ ಮನೆಗೆ ಹಿಂದಿರುಗಿರಲಿಲ್ಲ. ಅಲ್ಲದೆ ಅವರ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು ಎನ್ನಲಾಗಿದೆ.
ಈ ನಡುವೆ ಡಿ.30ರ ಸಂಜೆ ಗಿರೀಶ್ ಮೃತದೇಹ ಪಾಲೂರು ಗ್ರಾಮದ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದರೆ ಕೈ ಮತ್ತು ಕಾಲುಗಳಿಗೆ ಹಗ್ಗ ಬಿಗಿಯಲಾಗಿದ್ದು, ಸಾವಿನ ಬಗ್ಗೆ ಸಂಶಯ ಹುಟ್ಟು ಹಾಕಿದೆ.
ವಿಷಯ ತಿಳಿದ ನಾಪೋಕ್ಲು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದರು. ಮೃತನ ಕುಟುಂಬಸ್ಥರು ಇದು ವ್ಯವಸ್ಥಿತ ಕೊಲೆ ಎಂದು ಆರೋಪಿಸಿದ್ದಾರೆ. ಘಟನೆ ಕುರಿತು ಮೃತ ಗಿರೀಶ್ ಅವರ ಪತ್ನಿ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸಂಶಯಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.