ಬೆಂಗಳೂರು: ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 9 ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದ ಘಟನೆ ಟಿ ಬೇಗೂರು ಕ್ರಾಸ್ ಬಳಿ ನಡೆದಿದೆ.
ದಟ್ಟ ಮಂಜು ಕವಿದ ವಾತಾವರಣದಿಂದ ಅಪಘಾತ ಸಂಭವಿಸಿರುವುದಾಗಿ ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ. ತುಮಕೂರಿನಿಂದ ಬೆಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಚಾಲಕ ಅಚಾನಕ್ ಆಗಿ ಬ್ರೇಕ್ ಹಾಕಿದ್ದಾರೆ. ಹಿಂದೆಯೇ ವೇಗವಾಗಿ ಬರುತ್ತಿದ್ದ ಲಾರಿ ಬಸ್ ಗೆ ಡಿಕ್ಕಿ ಹೊಡೆದಿದೆ. ಅದರ ಹಿಂದೆ ಇದ್ದ ಖಾಸಗಿ ಬಸ್, ಕಾರು, ತರಕಾರಿ ಲಾರಿ ಸೇರಿದಂತೆ ಒಂಬತ್ತು ವಾಹನಗಳು ಸರಣಿಯಾಗಿ ಡಿಕ್ಕಿ ಹೊಡೆದುಕೊಂಡಿವೆ ಎಂದು ವರದಿಯಾಗಿದೆ.
ಅಪಘಾತದ ರಭಸಕ್ಕೆ ಲಾರಿ ಹಾಗೂ ಇತರ ವಾಹನಗಳು ರಸ್ತೆ ವಿಭಜಕದ ಮೇಲೆರಿದ್ದು, ರಸ್ತೆ ಸಂಚಾರ ಸಂಪೂರ್ಣವಾಗಿ ಅಸ್ತವ್ಯವಸ್ತವಾಗಿತ್ತು. ವಾಹನಗಳನ್ನು ತೆರವುಗೊಳಿಸಿ ಸಂಚಾರವನ್ನು ಸುಗಮಗೊಳಿಸಲು ಪೊಲೀಸರು ಬೆಳಗ್ಗೆ 11 ಗಂಟೆಯವರೆಗೂ ಹರಸಾಹಸ ಪಡುವಂತಾಯಿತು.
https://youtube.com/shorts/RVo7-P5qPvs?feature=share
ಘಟನೆಯಲ್ಲಿ ಓರ್ವ ವಾಹನ ಚಾಲಕನ ಕಾಲು ಮುರಿತಕ್ಕೊಳಗಾಗಿದೆ. ಉಳಿದಂತೆ ಇತರರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿವೆ. ಘಟನಾ ಸ್ಥಳಕ್ಕೆ ನೆಲಮಂಗಲ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.