ಬೆಂಗಳೂರು: ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕಾರ್ಯಕಾರಣಿ ಸಭೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಲ ತಂದಿದೆ. ಇದೇ ವೇಳೆ ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಚಿವ ಸಂಪುಟ ಪುನಾರಚನೆ ಮಾಡಲು ಚಿಂತನೆ ನಡೆದಿದೆ.
2023ರ ಚುನಾವಣೆ ಗೆಲ್ಲುವ ಗುರಿಯೊಂದಿಗೆ ನಿಷ್ಕ್ರಿಯ ಸಚಿವರಿಗೆ ಗೇಟ್ ಪಾಸ್ ನೀಡಿ, ವರ್ಚಸ್ಸು ಹೆಚ್ಚಿಸುವ ಹೊಸ ಟೀಂ ಸೇರ್ಪಡೆ ಮಾಡಿಕೊಳ್ಳಲಾಗುವುದು.ಇದಕ್ಕಾಗಿ ಹೈಕಮಾಂಡ್ ಹಂತದಲ್ಲಿಯೇ ತೀರ್ಮಾನ ಕೈಗೊಂಡು ಸ್ಥಳೀಯರ ಗೊಂದಲಕ್ಕೆ ಕಡಿವಾಣ ಹಾಕಲಾಗುವುದು ಎನ್ನಲಾಗಿದೆ.
ಪ್ರಾದೇಶಿಕತೆ, ಜಾತಿವಾರು ಪ್ರಾತಿನಿಧ್ಯ ಪರಿಗಣಿಸಿ ಸಮತೋಲನ ಸಂಪುಟ ರಚನೆ ಮಾಡಲಾಗುತ್ತದೆ. ಸರ್ಕಾರದ ವರ್ಚಸ್ಸು ಹೆಚ್ಚಿಸುವ ಉತ್ಸಾಹಿಗಳಿಗೆ ಸಂಪುಟದಲ್ಲಿ ಅವಕಾಶ ನೀಡಲಾಗುತ್ತದೆ. ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರ್ಪಡೆಯಾಗುವ ಸಾಧ್ಯತೆ ದಟ್ಟವಾಗಿದೆ.
ವಿಜಯೇಂದ್ರ ಅನೇಕ ಉಪ ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲದಂತಹ ಕ್ಷೇತ್ರಗಳಲ್ಲಿಯೂ ಪಕ್ಷದ ಅಭ್ಯರ್ಥಿಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಲ್ಲದೇ ಅವರು ರಾಜ್ಯ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಅವರು ಹೋದ ಕಡೆಯಲ್ಲೆಲ್ಲ ಹೆಚ್ಚಿನ ಜನ ಸೇರುತ್ತಾರೆ. ಅವರ ನಾಯಕತ್ವ ಗುಣ ಗುರುತಿಸಿದ ಪಕ್ಷದ ವರಿಷ್ಠರು ಸಚಿವ ಸ್ಥಾನ ನೀಡಲು ಚಿಂತನೆ ನಡೆಸಿದ್ದಾರೆ.
ಬಿ.ಎಸ್. ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ ಬಳಿಕ ಅವರ ಕುಟುಂಬವನ್ನು ಕಡೆಗಣಿಸಲಾಗುತ್ತಿದೆ ಎಂಬ ಮಾತು ಬಿಜೆಪಿ ಪಾಳಯದಲ್ಲಿ ಕೇಳಿ ಬರುತ್ತಿತ್ತು. ಈ ಅಪವಾದವನ್ನು ಹೋಗಲಾಡಿಸಲು ಪುತ್ರ ರಾಘವೇಂದ್ರರಿಗೆ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ನೀಡಲಾಗುತ್ತದೆ ಎಂದು ಹೇಳಲಾಗಿದೆ. ಸಂಕ್ರಾಂತಿ ಬಳಿಕ ಈ ಪ್ರಕ್ರಿಯೆಗಳು ನಡೆಯಲಿದ್ದು, ಕೆಲವು ಸಚಿವರಿಗೆ ನಡುಕ ಶುರುವಾಗಿದೆ. ಇನ್ನೂ ಕೆಲವರು ರೆಬಲ್ ಆಗಿದ್ದಾರೆ.