ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ಕಂಡು ಬಂದ ಹೊಸ ರೂಪಾಂತರ ಓಮಿಕ್ರಾನ್ ಡೆಲ್ಟಾಕ್ಕಿಂತ ಮೂರು ಪಟ್ಟು ಸಾಂಕ್ರಾಮಿಕವಾಗಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಿಂದಾಗಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.
ವಾರ್ ರೂಂ ಸ್ಥಾಪನೆ ಮಾಡುವ ಅಗತ್ಯವಿದೆ ಎಂದು ರಾಜ್ಯಗಳಿಗೆ ತಿಳಿಸಿರುವ ಕೇಂದ್ರ ಸರ್ಕಾರವು, ಹಲವಾರು ಅಗತ್ಯ ಕ್ರಮಗಳನ್ನು ಪಟ್ಟಿ ಮಾಡಿ ರಾಜ್ಯಗಳಿಗೆ ನೀಡಿದೆ. ಅಗತ್ಯವಿದ್ದರೆ ನೈಟ್ ಕರ್ಫ್ಯೂ ಅನ್ನು ಜಾರಿ ಮಾಡಿ ಎಂದು ಕೂಡಾ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಹೇಳಿದೆ.
ಇನ್ನು ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳು ನಿಯಂತ್ರಣ ಕ್ರಮಗಳು, ಮಿತಿಗಳನ್ನು ದಾಟುವ ಮುನ್ನವೇ ಅಗತ್ಯ ನಿರ್ಬಂಧವನ್ನು ಹೇರಬಹುದು ಎಂದು ಹೇಳಿರುವ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳಿಗೆ ತಾನು ಹೊರಡಿಸಿರುವ ಪತ್ರದಲ್ಲಿ, “ಓಮಿಕ್ರಾನ್ ಜೊತೆಗೆ ದೇಶದಲ್ಲಿ ಡೆಲ್ಟಾ ರೂಪಾಂತರವು ಕೂಡಾ ಈಗಲೂ ಇದೆ,” ಎಂದು ಎಚ್ಚರಿಕೆ ನೀಡಿದೆ.