ಬೆಳಗಾವಿ: ವಿಪಕ್ಷಗಳ ಭಾರೀ ವಿರೋಧದ ನಡುವೆಯೇ ವಿವಾದಿತ ಮತಾಂತರ ನಿಷೇಧ ವಿಧೇಯಕವನ್ನು ಮಂಗಳವಾರ ವಿಧಾನಸಭೆಯಲ್ಲಿ ಮಂಡನೆ ಮಾಡಲಾಯಿತು. ಭೋಜನದ ವಿರಾಮದ ಬಳಿಕ ಸದನ ಆರಂಭವಾಗುತ್ತಿದ್ದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ವಿಧೇಯಕವನ್ನು ಮಂಡನೆ ಮಾಡಿದರು.
‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಸಂರಕ್ಷಣಾ ವಿಧೇಯಕ 2021’ ಮಂಡನೆ ಮಾಡುತ್ತಿದ್ದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇದಿರಂತೆ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿತು. ವಿಪಕ್ಷಗಳ ಗದ್ದಲದ ಮಧ್ಯೆಯೇ ವಿಧೇಯಕವನ್ನು ಮಂಡಿಸಲಾಯಿತು. ಏಕಾಏಕಿ ವಿಧೇಯಕ ಮಂಡನೆ ಮಾಡಿದ್ದಕ್ಕೆ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿ ಗಲಾಟೆ ಶುರು ಮಾಡಿದರು. ಇದು ಜನ ವಿರೋಧಿ ಮಸೂದೆ ಅಂತಾ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ಮತಾಂತರ ನಿಷೇಧ ವಿಧೇಯಕ’ ಮಂಡನೆಗೆ ಸ್ಪೀಕರ್ ಅವಕಾಶ ನೀಡುತ್ತಿದ್ದಂತೆಯೇ ವಿಪಕ್ಷದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ವಿಧೇಯಕದ ಪ್ರತಿಯನ್ನೇ ನಮಗೆ ಕೊಟ್ಟಿಲ್ಲ, ಈ ಬಗ್ಗೆ ಚರ್ಚೆಯನ್ನೂ ಮಾಡಿಲ್ಲವೆಂದು ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದರು. ಇಂತಹ ವಿಧೇಯಕಗಳನ್ನು ಏಕೆ ಕದ್ದುಮುಚ್ಚಿ ತರ್ತೀರಿ. ಸರ್ಕಾರ ಕಳ್ಳತನದಿಂದ ವಿಧೇಯಕ ಮಂಡಿಸಿದೆ. ಸದನದಲ್ಲಿ ಇಷ್ಟ ಬಂದಂತೆ ಮಾಡುತ್ತೀರಾ? ಕರ್ನಾಟಕದ ಇತಿಹಾಸದಲ್ಲಿಯೇ ಇಂತಹ ಕೆಟ್ಟ ಸರ್ಕಾರ ಬಂದಿರಲಿಲ್ಲವೆಂದು ಸಿದ್ದರಾಮಯ್ಯ ಕಿಡಿಕಾರಿದರು.
ಇದು ಮೂಲಭೂತ ಹಕ್ಕುಗಳ ಉಲ್ಲಂಘನೆ, ಸಂವಿಧಾನದ ಉಲ್ಲಂಘನೆ. ಯಾವುದೇ ರೀತಿ ಚರ್ಚೆಯಾಗದೆ ಮಸೂದೆ ಮಂಡನೆ ಮಾಡಿರುವುದು ಸರಿಯಲ್ಲವೆಂದು ಸಿದ್ದರಾಮಯ್ಯ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿಯವರಿಗೆ ತಿಳಿಸಿದರು. ಈ ವೇಳೆ ಮಾತನಾಡಿದ ಕಾಗೇರಿಯವರು, ‘ವಿಧೇಯಕದ ಬಗ್ಗೆ ಪರ್ಯಾಲೋಚನೆಗೆ ನಾಳೆ ಅವಕಾಶ ಕೊಡುವುದಾಗಿ ಹೇಳಿದರು. ಸ್ಪೀಕರ್ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ಆರ್ಟಿಕಲ್ 25 ಉಲ್ಲಂಘನೆ ಆಗಿದೆ. ಸದನವನ್ನು ಬುಲ್ಡೋಜ್ ಮಾಡ್ತೀರಾ ಎಂದು ಪ್ರಶ್ನಿಸಿದರು.
ಮಸೂದೆ ಮಂಡನೆಗೆ ವಿರೋಧ ವ್ಯಕ್ತಪಡಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಳ್ಳತನದಿಂದ ವಿಧೇಯಕ ಮಂಡನೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಕಾನೂನು ಪ್ರಕಾರವಾಗಿಯೇ ವಿಧೇಯಕ ಮಂಡನೆ ಮಾಡಿದ್ದೇವೆಂದು ಗೃಹ ಸಚಿವ ಆರಗ ಜ್ಞಾನೇಂದ್ರ ಈ ವೇಳೆ ಹೇಳಿದರು. ಈ ವೇಳೆ ಸದನದಲ್ಲಿ ಕೆಲಕಾಲ ಆಡಳಿತ ಹಾಗೂ ವಿಪಕ್ಷಗಳ ಸದಸ್ಯರ ನಡುವೆ ಗದ್ದಲ ಉಂಟಾಯಿತು. ಈ ವೇಳೆ ಮಾತನಾಡಿದ ಸ್ಪೀಕರ್ ಕಾಗೇರಿ, ‘ಆಡಳಿತ ಪಕ್ಷದವರು ಕೇವಲ ಮಸೂದೆ ಮಂಡಿಸಿದ್ದಾರೆ. ಅದು ಇನ್ನೂ ಅಂಗೀಕಾರವಾಗಿಲ್ಲ. ನೀವು ಈ ಬಗ್ಗೆ ಚರ್ಚಿಸಿ ತೀರ್ಮಾನಕ್ಕೆ ಬನ್ನಿ. ಇನ್ನು ಸಮಯವಿದ್ದು, ವಿಧೇಯಕದಲ್ಲಿರುವ ಅಂಶಗಳ ಬಗ್ಗೆ ಚರ್ಚಿಸಿ ಅಂತಾ ಸಿದ್ದರಾಮಯ್ಯನವರಿಗೆ ಸಲಹೆ ನೀಡಿದರು.