ಬಂಟ್ವಾಳ. ತಾಲೂಕಿನ ಕಾವಳಮುಡೂರು ಗ್ರಾಮದ ಕಾರಿಂಜೇಶ್ವರ ದೇವಸ್ಥಾನ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ತಿಳಿಸಿದ್ದಾರೆ.
ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಸ್ಥಳಕ್ಕೆ ಈಗಾಗಲೇ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೇವಸ್ಥಾನದ ಸುತ್ತಲಿನ ಜಾಗದಲ್ಲಿ ಎರಡು ಕ್ರಶರ್ ಹಾಗೂ ಎರಡು ಕಲ್ಲು ಕ್ವಾರಿಗಳ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಲ್ಲದೇ ಗುತ್ತಿಗೆ ಪ್ರದೇಶದ ಹೊರಭಾಗದಲ್ಲಿ ಅಕ್ರಮ ಕಲ್ಲು ಸಾಗಾಣಿಕೆ ಮಾಡಿರುವುದರಿಂದ ಮಾಲೀಕರಿಗೆ 8.90 ಕೋಟಿ ರೂ. ದಂಡ ವಿಧಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.