ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐದು ಮಂದಿಗೆ ಒಂದೇ ದಿನದಲ್ಲಿ ಕೊರೊನಾ ರೂಪಾಂತರಿ ಓಮಿಕ್ರಾನ್ ವೈರಸ್ ಪತ್ತೆಯಾಗಿದ್ದು, ಕರಾವಳಿಯಲ್ಲಿ ಭೀತಿ ಆವರಿಸಿದೆ. ಇದರೊಂದಿಗೆ ರಾಜ್ಯದಲ್ಲಿ ಓಮಿಕ್ರಾನ್ ಪೀಡಿತರ ಸಂಖ್ಯೆ 13ಕ್ಕೇರಿದೆ.
ಮಂಗಳೂರು ಹೊರವಲಯದ ವಸತಿ ಶಾಲೆಯ ನಾಲ್ವರು ಮಕ್ಕಳಲ್ಲಿ ಓಮಿಕ್ರಾನ್ ವೈರಸ್ ಪತ್ತೆಯಾಗಿರುವ ಬಗ್ಗೆ ಆರೋಗ್ಯ ಅಧಿಕಾರಿಗಳು ದೃಢಪಡಿಸಿದ್ದಾರೆ. ಇನ್ನೊಬ್ಬ ಕೇರಳ ಮೂಲದ ಮೆಡಿಕಲ್ ವಿದ್ಯಾರ್ಥಿನಿಯಲ್ಲಿ ಓಮಿಕ್ರಾನ್ ವೈರಸ್ ಪತ್ತೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಆದವರನ್ನು ಪ್ರತಿ ದಿನವೂ ಓಮಿಕ್ರಾನ್ ವೈರಸ್ ಪತ್ತೆಗಾಗಿ ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಜಿನೋಮ್ ಸೀಕ್ವೆನ್ಸ್ ಪರೀಕ್ಷೆಯನ್ನು ಬೆಂಗಳೂರಿನಲ್ಲಿ ನಡೆಸಲಾಗುತ್ತಿದ್ದು, ಪ್ರತಿ ದಿನವೂ ಸೋಂಕಿತರ ಗಂಟಲ ದ್ರವದ ಮಾದರಿಯನ್ನು ಅಲ್ಲಿಗೆ ಕಳಿಸಿಕೊಡಲಾಗುತ್ತದೆ. ಹೀಗೆ ಕಳಿಸಿಕೊಟ್ಟಿದ್ದ ಐವರು ಸೋಂಕಿತರಲ್ಲಿ ಓಮಿಕ್ರಾನ್ ವೈರಸ್ ಇರುವುದು ಪತ್ತೆಯಾಗಿದೆ.
ವಸತಿ ಶಾಲೆಯ 14 ಮಂದಿ ವಿದ್ಯಾರ್ಥಿಗಳನ್ನು ಡಿ.10ರಂದು ಟೆಸ್ಟ್ ಮಾಡಿದ್ದಾಗ ಕೊರೊನಾ ಪಾಸಿಟಿವ್ ಕಂಡುಬಂದಿತ್ತು. ಅವರಲ್ಲಿ ನಾಲ್ವರಲ್ಲಿ ಓಮಿಕ್ರಾನ್ ಇರುವುದು ಕಂಡುಬಂದಿದೆ. ಆದರೆ, ಇವರಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದಿರುವುದು ಸೋಂಕು ಹೇಗೆ ಕಂಡುಬಂದಿದೆ ಅನ್ನುವ ಬಗ್ಗೆ ಆರೋಗ್ಯಾಧಿಕಾರಿಗಳು ತಲೆಕೆಡಿಸಿಕೊಂಡಿದ್ದಾರೆ. ಮಕ್ಕಳು ಮಾತ್ರ ಆರೋಗ್ಯದಿಂದಿದ್ದಾರೆ ಅನ್ನುವ ಮಾಹಿತಿಯನ್ನು ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ಓಮಿಕ್ರಾನ್ ಹೈರಿಸ್ಕ್ ಇರುವ ಘಾನಾ ದೇಶದಿಂದ ಬಂದಿದ್ದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿತ್ತು. ಆ ವ್ಯಕ್ತಿಯನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಗಂಟಲ ದ್ರವದ ಮಾದರಿಯನ್ನು ಬೆಂಗಳೂರಿಗೆ ಕಳಿಸಿಕೊಡಲಾಗಿತ್ತು.