ಮಂಗಳೂರು : ಉಪ್ಪಿನಂಗಡಿ ಪೋಲೀಸರ ಲಾಠಿ ಚಾರ್ಜ್ ಘಟನೆಯನ್ನು ಪಾಪ್ಯುಲರ್ ಫ್ರಂಟ್ ಬಲವಾಗಿ ಖಂಡಿಸಿದೆ.
ಸಂಘಟನೆಯ ಪ್ರಮುಖರಾದ ಅವರು ಎ.ಕೆ.ಅಶ್ರಫ್, ಇಜಾಜ್ ಅಹ್ಮದ್, ಖಾದರ್ ಕುಳಾಯಿ ಮತ್ತು ಜಾಬೀರ್ ಅರಿಯಡ್ಕ ಅವರು ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಅಕ್ರಮವಾಗಿ ಬಂಧಿಸಿದ ಮೂವರು ಕಾರ್ಯಕರತರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ನಾವು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದೆವು. ಈ ವೇಳೆ ಪೊಲೀಸರು ಯದ್ವಾ ತದ್ವಾ ಲಾಠಿ ಬೀಸಿದ್ದಾರೆ. ನಮ್ಮ ಧಾರ್ಮಿಕ ಗುರುವಿಗೂ ಗಂಭೀರ ಗಾಯವಾಗಿದ್ದು, ಓರ್ವ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ. 40 ಮಂದಿ ಗಾಯಗೊಂಡಿದ್ದು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ತಪ್ಪಿತಸ್ಥ ಪೋಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಡಿ. 17 ರಂದು ‘ಎಸ್ ಪಿ ಆಫೀಸ್ ಮಾರ್ಚ್’ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.
ಉಪ್ಪಿನಂಗಡಿ ಹಳೆಗೇಟ್‌ನ ಸುಬ್ರಹ್ಮಣ್ಯ ಕ್ರಾಸ್ ಬಳಿಯಲ್ಲಿನ ಮೀನಿನ ಅಂಗಡಿಯೊಂದಕ್ಕೆ ತಲವಾರು ದಾಳಿ ನಡೆಸಿ ಮೂವರನ್ನು ಕಡಿದು ಗಾಯ ಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗಾಗಿ ಶಂಕಿತ ಮೂವರು ಪಿಎಫ್‌ಐ ಮುಖಂಡರನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದಿರುವುದನ್ನು ಪ್ರತಿಭಟಿಸಿ ಅವರನ್ನು ತತ್‌ಕ್ಷಣ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಪಿಎಫ್‌ಐ ಕಾರ್ಯಕರ್ತರು ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ಮಂಗಳವಾರ ಸಂಜೆ ಪ್ರತಿಭಟನೆ ನಡೆಸಿದ್ದರು. ರಾತ್ರಿಯ ವೇಳೆ ಪೊಲೀಸರು ಲಾಠಿಚಾರ್ಜ್ ಮಾಡಿ ಜನರನ್ನು ಚದುರಿಸಿದ್ದರು. ಈ ವೇಳೆ ಹಲವರು ಗಾಯಗೊಂಡಿದ್ದರು.
ಪಿಎಫ್‌ಐನ ಉಪ್ಪಿನಂಗಡಿ ಜಿಲ್ಲಾ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಮೆಜೆಸ್ಟಿಕ್, ಎಸ್‌ಡಿಪಿಐ ನೆಕ್ಕಿಲಾಡಿ ಗ್ರಾಮ ಸಮಿತಿ ಅಧ್ಯಕ್ಷ ಝಕಾರಿಯಾ ಕೊಡಿಪ್ಪಾಡಿ ಹಾಗೂ ಉಪ್ಪಿನಂಗಡಿ ಬ್ಲಾಕ್ ಸಮಿತಿ ಅಧ್ಯಕ್ಷ ಮುಸ್ತಾಫ ಲತೀಫ್ ಅವರನ್ನು ತಲವಾರು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗಾಗಿ ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಒಬ್ಬರನ್ನು ಬಿಡುಗಡೆ ಮಾಡಿದ್ದರು.