ಮಂಗಳೂರು: ‘ಹೇಂಗೊಳಯಾ ಬಾವ, ಮನೆಯವು ಏನ್ ಮಾಡ್ವೆ?ನೀವ್ ಉಸಾರ್ ಒಳರಿಯಾ…?
ಮಲೆನಾಡು- ಕರಾವಳಿಯ ಪ್ರದೇಶಗಳಲ್ಲಿ ನಮಗೆ ನಿತ್ಯ ಕೇಳಿಬರುವ ಉಭಯ ಕುಶಲೋಪರಿಯ ನಿನಾದವಿದು. ಅಂದ ಹಾಗೆ ಈ ಭಾಷೆ ಅರೆಭಾಷೆ. ಡಿ. 15ರಂದು ಅರೆಭಾಷೆ ದಿನ ಆಚರಿಸಲಾಗುತ್ತಿದ್ದು, ಈಗ ಅದಕ್ಕೆ ದಶಮಾನೋತ್ಸವ ಸಂಭ್ರಮ.
‘ಅರೆಭಾಷೆ ಎಂದರೆ ಇತರ ಜನರಿಗೆ ಈ ಮಾತನ್ನು ಕೇಳುವಾಗ ಅರ್ಧಂಬರ್ಧ ಅರ್ಥವಾಗುವಂತೆ ಇದ್ದುದರಿಂದ ಇದನ್ನು ಅರೆಭಾಷೆ, ಅರೆಗನ್ನಡ ಎಂದು ಗುರುತಿಸಬಹುದು’ ಎಂದು ಸಂಶೋಧಕರು ಹೇಳಿದ್ದಾರೆ.
ಅರೆಭಾಷೆ ಮತ್ತು ಸಂಸ್ಕೃತಿಯ ಅಭ್ಯುದಯಕ್ಕೆ ರಾಜ್ಯ ಸರ್ಕಾರವು 2011ರ ಡಿ.15ರಂದು ಕರ್ನಾಟಕ ಅರೆಭಾಷಾ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಿತು. ಇದೇ ದಿನವನ್ನು ‘ಅರೆಭಾಷಾ ದಿನ’ ಎಂದು ಆಚರಿಸಲಾಗುತ್ತಿದೆ.
‘ದಕ್ಷಿಣ ಕನ್ನಡ, ಕೊಡಗು, ಕಾಸರಗೋಡು ಸೇರಿದಂತೆ ಕರಾವಳಿಯ ಜಿಲ್ಲೆಗಳಲ್ಲಿ ಕೇಳಿ ಬರುವ ಈ ಭಾಷೆಯನ್ನು ಅರೆಭಾಷೆ, ಅರೆಬಾಸೆ, ಅರೆಗನ್ನಡ, ಗೌಡ ಕನ್ನಡ ಅಂತಲೂ ಕರೆಯುತ್ತಾರೆ. ಗೌಡ ಸಮುದಾಯದ ಭಾಷೆಯು ಈಗ ಪರಿಸರದ ಭಾಷೆಯಾಗುತ್ತಿದೆ, ವ್ಯಾವಹಾರಿಕ ಭಾಷೆಯಾಗಿಯೂ ಬದಲಾಗುತ್ತಿದೆ.
‘ಹಳಗನ್ನಡ, ತುಳು, ಮಲಯಾಳಂ, ಕೊಡವ, ಹವಿಗನ್ನಡ ಹೀಗೆ ದ್ರಾವಿಡ ಭಾಷೆಯ ಉಪಭಾಷೆಗಳ ಪ್ರಭಾವವಿದೆ. ತುಳುನಾಡಿನ ದೈವಾರಾಧನೆ, ಮಲಯಾಳ ಮೂಲದ ತೈಯಂ, ಒತ್ತೆಕೋಲ, ಮರಾಠಿಗರ (ಮರಾಠಿ ನಾಯ್ಕ) ಗೋಂದೊಲು ಪೂಜೆ, ಸಿದ್ಧವೇಷದಂತಹ ಆಚರಣಾತ್ಮಕ ಕುಣಿತ, ಜಾಲಾಟ, ಪುರುಷ ಭೂತ, ಬಚ್ಚನಾಯಕದಂತಹ ಆಚರಣೆಗಳು ಅರೆಭಾಷೆ ಪ್ರದೇಶದಲ್ಲಿವೆ
ಕನ್ನಡ, ತುಳು, ಇಂಗ್ಲಿಷ್ ಮತ್ತಿತರ ಭಾಷೆಗಳಿಗೆ ಅರೆಭಾಷಿಗರ ಕೊಡುಗೆ ಅಪಾರ. ಡಾ.ಪುರುಷೋತ್ತಮ ಬಿಳಿಮಲೆ, ಕೆ. ಚಿನ್ನಪ್ಪ ಗೌಡ, ಕುಶಾಲಪ್ಪ ಗೌಡ, ದೇವಿಪ್ರಸಾದ್ ಸಂಪಾಜೆ, ಪೂವಪ್ಪ ಕಣಿಯೂರು, ಕೋರನ ಸರಸ್ವತಿ, ವಿಶ್ವನಾಥ ಬದಿಕಾನ, ಲಾವಣ್ಯ ಕೊಟ್ಟಕೇರಿಯನ, ಕೆ. ಅರ್. ಗಂಗಾಧರ… ಹೀಗೆ ಸಾಧಕರ ಪಟ್ಟಿ ದೊಡ್ಡದಿದೆ.
ಅಂದಾಜಿನ ಪ್ರಕಾರ ಕೊಡಗಿನಲ್ಲಿ ಎರಡೂವರೆ ಲಕ್ಷ, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕಾಸರಗೋಡು ಭಾಗದಲ್ಲಿ ಮೂರು ಲಕ್ಷದಷ್ಟು ಅರೆಭಾಷಿಗರಿದ್ದಾರೆ. ಬಹುತೇಕರು ವ್ಯವಸಾಯವನ್ನು ನೆಚ್ಚಿಕೊಂಡಿದ್ದು, ಪ್ರಕೃತಿ ಜೊತೆ ಬದುಕು ಸಾಗಿಸುತ್ತಿದ್ದಾರೆ. ಹೀಗಾಗಿ ಕಾಯಕ ಮತ್ತು ಸೌಹಾರ್ದಕ್ಕೆ ಮಹತ್ವ ನೀಡಿ ಮಣ್ಣಿನ ಗುಣ ಎತ್ತಿ ಹಿಡಿದಿದ್ದಾರೆ. ‘ಅರೆಬಾಸೆ’ ಯನ್ನು ಬರೆಯಲು ಕನ್ನಡ ಲಿಪಿಯನ್ನು ಬಳಸುತ್ತಿದ್ದಾರೆ.
ಡಿ.15ರಂದು ನಾಡಿನಾದ್ಯಂತ 16ಕ್ಕೂ ಹೆಚ್ಚು ಕಡೆಗಳಲ್ಲಿ ಅಕಾಡೆಮಿಯು ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಂಡಿದೆ. ಈಗಾಗಲೇ 15 ಸಂಸ್ಕೃತಿ ಶಿಬಿರಗಳನ್ನು ಗ್ರಾಮ ಮಟ್ಟದಲ್ಲಿ ಏರ್ಪಡಿಸಲಾಗಿದೆ.