ಮಂಗಳೂರು: ವಿಶ್ವ ಕೊಂಕಣಿ ಕೇಂದ್ರದ ಪ್ರತಿಷ್ಠಿತ “ವಿಮಲಾ ವಿ. ಪೈ ವಿಶ್ವ ಕೊಂಕಣಿ ಸಾಹಿತ್ಯ ಪುರಸ್ಕಾರ’ ಪುರಸ್ಕೃತ ಗೋವಾದ ದಾಮೋದರ ಮಾವಜೊ ಅವರಿಗೆ 57ನೇ ಜ್ಞಾನಪೀಠ ಪ್ರಶಸ್ತಿ ಪುರಸ್ಕಾರ ಲಭಿಸಿದೆ.
ಅವರು ಸಣ್ಣ ಕಥೆ, ಕಾದಂಬರಿ, ಅಂಕಣ ಮತ್ತು ಚಿತ್ರಕಥೆ ಬರಹಗಾರರಾಗಿದ್ದು, 3 ದಶಕಗಳಿಂದ ಕೊಂಕಣಿಯಲ್ಲಿ ಬರೆಯುತ್ತಿದ್ದಾರೆ. ಗೋವಾ ಕಲಾ ಅಕಾಡೆಮಿ ಪ್ರಶಸ್ತಿ ಮತ್ತು ಕೊಂಕಣಿ ಭಾಷಾ ಮಂಡಲ ಪ್ರಶಸ್ತಿಯನ್ನು ಪಡೆದಿದ್ದಾರೆ.
ಮಾವಜೊ ಅವರಿಗೆ 2011-2012ರಲ್ಲಿ ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯದ ಹಿರಿಯ ಫೆಲೋಶಿಪ್ ಲಭಿಸಿತ್ತು. 2019ರಲ್ಲಿ ಮಂಗಳೂರಿನ ವಿಶ್ವಕೊಂಕಣಿ ಕೇಂದ್ರದಲ್ಲಿ ಜರಗಿದ “ಕಾಳಿಗಂಗಾ’ ಕನ್ನಡ ಅನುವಾದ ಕಾದಂಬರಿಯ ಲೋಕಾರ್ಪಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅವರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಾದಂಬರಿ “ಕಾರ್ಮೇಲಿನ’ ಕನ್ನಡ ಹಾಗೂ ಹಲವಾರು ಭಾಷೆಗಳಿಗೆ ಅನುವಾದಗೊಂಡಿದೆ. ಅವರ ಕೆಲವು ಕಥೆಗಳು ಇಂಗ್ಲಿಷ್ ಜತೆಗೆ ಪೋರ್ಚುಗೀಸ್ ಮತ್ತು ಫ್ರೆಂಚ್ ಭಾಷೆಗಳಿಗೆ ಅನುವಾದಗೊಂಡಿವೆ.