ಕುಕ್ಕೆ ಸುಬ್ರಹ್ಮಣ್ಯ: ರಾಜ್ಯದ ಪ್ರಸಿದ್ದ ನಾಗಸನ್ನಿದಿ ಮಹತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ವಾರ್ಷಿಕ ಜಾತ್ರಾ ಪ್ರಯುಕ್ತ ಮಾರ್ಗಶಿರ ಶುದ್ದ ಪಂಚಮಿಯ ದಿನವಾದ ಇಂದು(ಡಿ.8)ತೈಲಾಭ್ಯಂಜನ ಮತ್ತು ಪಂಚಮಿ ರಥೋತ್ಸವ ನೆರವೇರಲಿದೆ.
ರಾತ್ರಿ ವಿಶೇಷ ಪಾಲಕಿ ಉತ್ಸವ ಮತ್ತು ಬಂಡಿ ಉತ್ಸವ ದೇವಳದ ಹೊರಾಂಗಣದಲ್ಲಿ ಜರುಗಲಿದೆ. ರಾತ್ರಿ ಪಂಚಮಿ ರಥೋತ್ಸವದ ಬಳಿಕ ಸವಾರಿ ಕಟ್ಟೆಯಲ್ಲಿ ಕಟ್ಟೆ ಪೂಜೆ ಮತ್ತು ಆಕರ್ಷಣೀಯ “ಕುಕ್ಕೆಬೆಡಿ” ಪ್ರದರ್ಶಿತವಾಗಲಿದೆ.
ನಾಳೆ (ಡಿ.9) ಪ್ರಾತಃಕಾಲ 6.58ರ ವೃಶ್ಚಿಕ ಲಗ್ನದ ಶುಭ ಮುಹೂರ್ತದಲ್ಲಿ ವೈಭವದ ಚಂಪಾಷಷ್ಟಿ ಮಹಾರಥೋತ್ಸವ ನೆರವೇರಲಿದ್ದು, ಶ್ರೀ ಸುಬ್ರಹ್ಮಣ್ಯ ದೇವರು ರಥಾರೂಢರಾಗಿ ಭಕ್ತರಿಗೆ ಅಭಯ ನೀಡಲಿದ್ದಾರೆ. ಕೊರೊನಾ ಕಾರಣದಿಂದ ಕಳೆದ ಬಾರಿ ಸರಳವಾಗಿ ನಡೆದಿದ್ದ ಜಾತ್ರೆ ಈ ಬಾರಿಯೂ ಮಾರ್ಗಸೂಚಿ ಅನ್ವಯ ನಡೆಯಲಿದೆ.
ದೇವಳದಲ್ಲಿ ಈಗಾಗಲೇ ಭಕ್ತರಿಂದ ಬೀದಿ ಮಡೆಸ್ನಾನ ಸೇವೆ ಮುಂತಾದ ಹಲವು ಸೇವೆಗಳು ನೆರವೇರುತ್ತಿವೆ. ಕುಕ್ಕೆ ದೇವನ ಜಾತ್ರೆ ಪ್ರಯುಕ್ತ ಎಲ್ಲೆಡೆ ಸಂಭ್ರಮ ಮನೆ ಮಾಡಿದೆ.
ರಥಗಳಿಗೆ ಶಿಖರ ಮುಹೂರ್ತ
ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಜಾತ್ರಾ ಮಹೋತ್ಸವ ಪ್ರಧಾನ ಮೂರು ದಿನಗಳಾದ ಚೌತಿ, ಪಂಚಮಿ ಹಾಗೂ ಷಷ್ಠಿಯಂದು ಶ್ರೀ ದೇವಳದಲ್ಲಿ ರಾತ್ರಿ ಪ್ರಾರ್ಥನೆ ಸೇವೆ ನಡೆಯುವುದಿಲ್ಲ. ಅಲ್ಲದೆ ಪಂಚಾಮೃತ ಮಹಾಭಿಷೇಕ ಸೇವೆಯು ಕೂಡಾ ಈ ದಿನಗಳಲ್ಲಿ ನಡೆಯುವುದಿಲ್ಲ. ಅಲ್ಲದೆ ಷಷ್ಠಿಯಂದು ಆಶ್ಲೇಷ ಬಲಿ ಹಾಗೂ ನಾಗಪ್ರತಿಷ್ಠೆ ಸೇವೆಗಳು ನೆರವೇರುವುದಿಲ್ಲ.
ಜಾತ್ರೆ ಯಶಸ್ವಿಗೆ ಎಲ್ಲ ಸಿದ್ಧತೆಗಳು ನಡೆದಿವೆ. ವಾಹನ ಪಾರ್ಕಿಂಗ್, ಭದ್ರತೆ, ಭಕ್ತರ ಪ್ರಯಾಣಕ್ಕೆ ಸಿದ್ಧತೆಗಳು ನಡೆದಿವೆ, ಕ್ಷೇತ್ರದಲ್ಲಿ ಬೀದಿ ಮಡೆಸ್ನಾನ, ಎಡೆಸ್ನಾನ ಉರುಳು ಸೇವೆಗಳು ನಡೆಯುತಿದ್ದು ಸೇವೆ ನಡೆಸಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕುಡಿಯುವ ನೀರು, ಶೌಚಾಲಯ ಜತೆಗೆ ಸ್ವಚ್ಚತೆಗೆ ಆಧ್ಯತೆ ನೀಡಲಾಗಿದೆ. ಜಾತ್ರೆ ವೇಳೆ ಸಂತೆ ವ್ಯಾಪಾರ ಅಂಗಡಿಗಳು ತೆರೆದುಕೊಂಡಿವೆ.