ಕಡಬ : ಆಪತ್ಕಾಲದಲ್ಲಿ ಚಿನ್ನ ಅಡವಿಟ್ಟು ಹಣ ಪಡೆದುಕೊಳ್ಳುವುದು ಸಾಮಾನ್ಯ. ಆದರೆ ಅಡವಿಡುವ ಚಿನ್ನದ ಬಗ್ಗೆ ನಮ್ಮಲ್ಲಿಯೂ ಮಾಹಿತಿ ಇರುತ್ತಾ? ಅಂತ ಕೇಳಿದ್ರೆ ಬಹುಜನರ ಉತ್ತರ ಇಲ್ಲ ಎಂಬುದು. ಆದರೆ ನಾವು ಅಡವಿಟ್ಟ ಚಿನ್ನದ ಯಥಾವತ್ ಮಾಹಿತಿ ನಮ್ಮಲ್ಲಿ ಇರಲೇಬೇಕು. ಇಲ್ಲವಾದಲ್ಲಿ ಬ್ಯಾಂಕ್ ನವರು ಯಾಮಾರಿಸಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿ.
ದ.ಕ ಜಿಲ್ಲೆಯ ಕಡಬದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಗ್ರಾಹಕರೊಬ್ಬರು ಅಡವಿಟ್ಟ ಚಿನ್ನದ ಪೈಕಿ ಕಿವಿಯೋಲೆಯೊಂದು ಬಿಡಿಸುವ ಸಂದರ್ಭದಲ್ಲಿ ನಾಪತ್ತೆಯಾಗಿದ್ದು, ಬಳಿಕ ವಾರಸುದಾರರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ನಂತರ ಕಿವಿಯೋಲೆಯನ್ನು ಬ್ಯಾಂಕ್ ಸಿಬ್ಬಂದಿ ಹಿಂತಿರುಗಿಸಿದ ಘಟನೆ ನಡೆದಿದೆ.
ಕಡಬ ಸಮೀಪದ ಕೋಡಿಂಬಾಳ ಗ್ರಾಮದ ಮಡ್ಯಡ್ಕ ನಿವಾಸಿ ಪುಷ್ಪಲತಾ ಎಂಬುವರು ಸ್ಥಳೀಯ ಕೆನರಾ ಬ್ಯಾಂಕ್ನಲ್ಲಿ ತಮ್ಮ ಚಿನ್ನದೊಡವೆಗಳನ್ನು ಅಡವಿಟ್ಟು ಸಾಲ ಪಡೆದಿದ್ದರು. ಕೆಲ ದಿನಗಳ ಬಳಿಕ ಚಿನ್ನದೊಡವೆಗಳನ್ನು ಪರಶೀಲಿಸಿದಾಗ ಅದರಲ್ಲಿ ಕಿವಿಯೋಲೆಯೊಂದು ನಾಪತ್ತೆಯಾಗಿತ್ತು.
ಇದನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಒಪ್ಪದ ಬ್ಯಾಂಕ್ ಸಿಬ್ಬಂದಿ ನೀವು ಅಡಮಾನ ಇಟ್ಟ ಚಿನ್ನ ಇಷ್ಟೇ ಎಂದು ವಾದಿಸಿದ್ದರು. ಈ ಬಗ್ಗೆ ಪುಷ್ಪಲತಾ ಅವರು ಮಂಗಳೂರು ರೀಜನಲ್ ಅಧಿಕಾರಿಗೆ ದೂರು ನೀಡಿದ್ದಾರೆ. ಅವರು ಕೂಡ ಬ್ಯಾಂಕ್ ಸಿಬ್ಬಂದಿಯ ಮಾತಿನಂತೆ ಅವರ ಪರವಾಗಿಯೇ ವಾದಿಸಿದ್ದು, ಇದರಿಂದ ಕೆರಳಿದ ವಾರಸುದಾರರು ಡಿ.2ರಂದು ಕಡಬ ಠಾಣೆಗೆ ದೂರು ನೀಡಿದ್ದರು.
ನಿನ್ನೆ ದೂರಿನ ವಿಚಾರಣೆಗಾಗಿ ಪುಷ್ಪಲತಾ ಅವರನ್ನು ಠಾಣೆಗೆ ಕರೆದಾಗ, ಅದೇ ಸಮಯಕ್ಕೆ ಠಾಣೆಗೆ ಬಂದ ಬ್ಯಾಂಕ್ ಸಿಬ್ಬಂದಿ ನಿಮ್ಮ ಕಿವಿಯೋಲೆ ಸಿಕ್ಕಿದೆ ಎಂದು ತಿಳಿಸಿದ್ದಾರೆ. ಬ್ಯಾಂಕ್ನ ಹಳೆಯ ಮ್ಯಾನೇಜರ್ ಅದನ್ನು ಬೇರೆ ಲಾಕರ್ನಲ್ಲಿ ಇಟ್ಟ ಕಾರಣ ಅದು ನಾಪತ್ತೆಯಾಗಿತ್ತು. ತಪಾಸಣೆ ಬಳಿಕ ಕಿವಿಯೋಲೆ ಸಿಕ್ಕಿದೆ ಎಂದು ಬ್ಯಾಂಕ್ ಸಿಬ್ಬಂದಿ ಸಮಜಾಯಿಷಿ ನೀಡಿದ್ದಾರೆ. ಕೊನೆಗೂ ಬ್ಯಾಂಕ್ ಸಿಬ್ಬಂದಿ ಮೇಲೆ ದೂರು ನೀಡಿದ ಬಳಿಕ ಚಿನ್ನದೊಡವೆಯನ್ನು ವಾಪಸ್ ನೀಡಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.