ಮಂಗಳೂರು: ಪುತ್ತೂರು ಸಮೀಪದ ಉಪ್ಪಿನಂಗಡಿ ಬಳಿಯ ಇಳಂತಿಲ ಎಂಬಲ್ಲಿ ಐವರು ಮುಸ್ಲಿಂ ಯುವಕರ ಮೇಲೆ ತಲವಾರು ದಾಳಿ ನಡೆದಿರುವ ಘಟನೆ ವರದಿಯಾಗಿದೆ. ತಲವಾರು ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಐದು ಮಂದಿ ಯುವಕರನ್ನು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆಂದು ತಿಳಿದು ಬಂದಿದೆ.
ಗಾಯಗೊಂಡ ಯುವಕರನ್ನು ಝಕರಿಯಾ ಇಳಂತಿಲ, ಸಿದ್ದೀಕ್, ಅಯ್ಯೂಬ್, ಫಯಾಝ್ ಮತ್ತು ಹಫೀಜ್ ಎಂದು ಗುರುತಿಸಲಾಗಿದೆ.
ಸಂಘಪರಿವಾರದಲ್ಲಿ ಗುರುತಿಸಿಕೊಂಡಿದ್ದ ಎನ್ನಲಾದ ಜಯರಾಮ್ ಮತ್ತು ಆತನ ಸಹಚರರ ತಂಡ ಈ ತಲವಾರು ದಾಳಿ ನಡೆಸಿದ್ದಾಗಿ ಹೇಳಲಾಗಿದೆ. ಈತನ ವಿರುದ್ದ ಈ ಹಿಂದೆಯೂ ತಲವಾರು ಝಳಪಿಸಿದ್ದ ಆರೋಪ ಕೇಳಿ ಬಂದಿತ್ತು ಎಂದು ಮೂಲಗಳಿಂದ ತಿಳಿದುಬಂದಿದೆ.
ಜಯರಾಮ್ ನ ತಂಡ ಇಳಂತಿಲ ಪ್ರದೇಶದಲ್ಲಿ ಇದ್ದ ಹಫೀಜ್ ಮತ್ತು ಫಯಾಝ್ ಮೇಲೆ ಮೊದಲು ದಾಳಿ ನಡೆಸಿದ್ದು, ಇವರಿಬ್ಬರು ತಪ್ಪಿಸಿಕೊಂಡ ಬಳಿಕ ಝಕರಿಯಾ, ಸಿದ್ದೀಕ್ ಮತ್ತು ಅಯ್ಯೂಬ್ ಎಂಬ ಮೂವರು ಯುವಕರ ಮೇಲೆ ಮತ್ತೆ ತಲವಾರು ದಾಳಿ ನಡೆಸಿತು ಎನ್ನಲಾಗಿದೆ. ಝಕಾರಿಯಾ, ಸಿದ್ದೀಕ್ ಮತ್ತು ಅಯ್ಯೂಬ್ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪುತ್ತೂರು ಸುತ್ತಮುತ್ತ ಸಂಘ ಪರಿವಾರ ಹಾಗೂ ಮುಸ್ಲಿಂ ಸಂಘಟನೆಗಳಿಂದ ಕಳೆದೊಂದು ತಿಂಗಳಿನಿಂದ ಸಾಮರಸ್ಯ ಕದಡುವ ಕೃತ್ಯಗಳು ನಡೆಯುತ್ತಿದ್ದು, ಶಾಂತಿ ಕದಡುವ ಪ್ರಯತ್ನ ನಡೆಯುತ್ತಿದೆ. ಈ ಕುರಿತು ಪೊಲೀಸರು ಕ್ರಮ ಕೈಗೊಳ್ಳಲು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.