ಕಾನ್ಪುರ್, ಡಿ.4 : ಕೋವಿಡ್ ರೂಪಾಂತರಿ ವರ್ಷ ವೈರಸ್ ಒಮಿಕ್ರಾನ್ ಸೋಂಕಿಗೆ ಹೆದರಿ ಮೆಡಿಕಲ್ ಕಾಲೇಜಿನ ವಿಧಿವಿಜ್ಞಾನ ವಿಭಾಗದ ಹಿರಿಯ ಪ್ರೊಫೆಸರ್ ಒಬ್ಬರು ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಂದು ಹಾಕಿದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಒಮಿಕ್ರಾನ್ ಸೋಂಕು ಯಾರನ್ನೂ ಬಿಡುವುದಿಲ್ಲ. ಎಲ್ಲರನ್ನೂ ಕೊಲ್ಲುತ್ತದೆ. ನನ್ನ ಅಜಾಗ್ರತೆಯಿಂದಾಗಿ ಸಮಸ್ಯೆ ಆಗಿದ್ದು ಇದರಿಂದ ಪಾರಾಗುವುದು ಸಾಧ್ಯವಿಲ್ಲ ಎಂದು ಡೆತ್ ನೋಟ್ ಬರೆದಿಟ್ಟಿರುವುದು ಪತ್ತೆಯಾಗಿದೆ. ಪತ್ನಿ, ಮಕ್ಕಳನ್ನು ಕೊಂದು ಬಳಿಕ ತನ್ನ ಸಹೋದರನಿಗೆ ವಾಟ್ಸಪ್ ಮೆಸೇಜ್ ಹಾಕಿದ್ದ. ಪೊಲೀಸರಿಗೆ ತಿಳಿಸುವಂತೆ ಹೇಳಿದ್ದ. ಘಟನಾ ಸ್ಥಳದಲ್ಲಿ ಸುಮಾರು 10 ಪುಟಗಳ ಡೆತ್ ನೋಟ್ ಸಿಕ್ಕಿದೆ.
ಈ ಸೋಂಕಿನಿಂದ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಹೀಗಾಗಿ ನಾನು ನನ್ನ ಪತ್ನಿ, ಮಕ್ಕಳನ್ನು ಹತ್ಯೆಗೈದಿದ್ದೇನೆ. ಇದಕ್ಕೆ ಬೇರೆ ಯಾರೂ ಹೊಣೆಗಾರರಲ್ಲ ಎಂದು ಪ್ರೊಫೆಸರ್ ಸುಶೀಲ್ ಸಿಂಗ್ ಡೆತ್ ನೋಟ್ ನಲ್ಲಿ ಬರೆದಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸುಶೀಲ್ ಸಿಂಗ್ ಕಾನ್ಪುರ್ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದರು. ಘಟನೆ ನಡೆದ ಕಲ್ಯಾಣ್ ಪುರ್ ಭಾಗದ ಅಪಾರ್ಟ್ಮೆಂಟಿನ ಐದನೇ ಅಂತಸ್ತಿಗೆ ಪೊಲೀಸರು ತೆರಳಿ ಬಾಗಿಲು ಒಡೆದಾಗ, ಪ್ರೊಫೆಸರ್ ಪತ್ನಿ ಚಂದ್ರಪ್ರಭಾ (48), ಪುತ್ರ ಶಿಖರ್ ಸಿಂಗ್ (21), ಪುತ್ರಿ ಖುಷಿ ಸಿಂಗ್ (16) ರಕ್ತದ ಮಡುವಿನಲ್ಲಿ ಸತ್ತು ಬಿದ್ದಿರುವುದು ಪತ್ತೆಯಾಗಿದೆ.
ಆರೋಪಿ ಪ್ರೊಫೆಸರ್ ಸುಶೀಲ್ ಸಿಂಗ್ ನಾಪತ್ತೆಯಾಗಿದ್ದು ಯಾಕೆ, ಆತ ಎಲ್ಲಿ ಅಡಗಿರಬಹುದು ಅಥವಾ ಬೇರೆ ಎಲ್ಲಿಯಾದರೂ ಆತ್ಮಹತ್ಯೆಗೆ ಶರಣಾಗಿರಬಹುದೇ ಎಂಬ ಶಂಕೆ ಮೂಡಿದೆ.
ಅಲ್ಲದೇ, ಡೈರಿಯಲ್ಲಿ ತಾನು ಗುಣಪಡಿಸಲಾಗದ ರೋಗದಿಂದ ಬಳಲುತ್ತಿದ್ದು ಪತ್ನಿ ಮಕ್ಕಳನ್ನು ಸಮಸ್ಯೆಗೆ ಸಿಲುಕಿಸಲು ಇಷ್ಟವಿಲ್ಲ. ಹಾಗಾಗಿ ಈ ಕೆಲಸ ಮಾಡಿದ್ದೇನೆ ಎಂದು ಬರೆದಿದ್ದು ಇದೇ ಸಂಶಯಕ್ಕೆ ಕಾರಣವಾಗಿದೆ.